ಕೋಲ್ಕತ್ತಾ : ಬೆನ್ನುನೋವಿನಿಂದಾಗಿ ಭಾರತ ಕ್ರಿಕೆಟ್ ತಂಡ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಒಂದು ವರ್ಷಕ್ಕೂ ಹೆಚ್ಚು ಕಾಲ ಮೈದಾನದಿಂದ ಹೊರಗುಳಿದಿದ್ದಾರೆ. ಮಹತ್ವದ ಪಂದ್ಯಾವಳಿಗಳಲ್ಲಿ ಆಡಿ ಮಿಂಚ ಬೇಕಿದ್ದ ಬುಮ್ರಾ ನೋವಿನಲ್ಲಿ ಕೇವಲ ಪಂದ್ಯ ನೋಡುವಂತಾಗಿತ್ತು. ಆದರೆ ಇದೀಗ ಕ್ರಿಕೆಟ್ ಅಭಿಮಾನಿಗಳಿ ಸಿಹಿ ಸುದ್ದಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೂಲಗಳು ತಿಳಿಸಿವೆ.
ಈಗಾಗಲೇ ನೆಟ್ನಲ್ಲಿ ಅಭ್ಯಾಸ ನಡೆಸುತ್ತಿರುವ ಬುಮ್ರಾ ಆಗಸ್ಟ್‌ನಲ್ಲಿ ನಡೆಯಲಿರುವ ಐರ್ಲೆಂಡ್ ವಿರುದ್ಧ ಟಿ - ಟ್ವೆಂಟಿ ಸರಣಿ ವೇಳೆ ತಂಡಕ್ಕೆ ಮರಳಲು ಬುಮ್ರಾ ಸಿದ್ಧರಾಗಿದ್ದಾರೆ. ಆಗಸ್ಟ್ 18, 20 ಮತ್ತು 23 ರಂದು ಡಬ್ಲಿನ್‌ನಲ್ಲಿ ನಡೆಯಲಿರುವ ಮೂರು ಪಂದ್ಯಗಳಲ್ಲಿ ಅಂತಾರಾಷ್ಟ್ರೀಯ ಡೆತ್ ಓವರ್ ಸ್ಪೆಷಲಿಸ್ಟ್ ವೇಗಿ ಬೌಲಿಂಗ್ ಅನ್ನು ಪರೀಕ್ಷಿಸಲಾಗುತ್ತಿದ್ದು, ಪಂದ್ಯವಾಡಲು ಬೇಕಾದ ಫಿಟ್‌ನೆಸ್ ತಯಾರಿ ನಡೆಸುತ್ತಿದ್ದಾರೆ ಎಂದು ಬಿಸಿಸಿಐಯ ಮೂಲವೊಂದು ಈಟಿವಿ ಭಾರತ್‌ಗೆ ತಿಳಿಸಿದೆ. ಮತ್ತೊಂದೆಡೆ ಹೊಸದಾಗಿ ನೇಮಕಗೊಂಡ ಬಿಸಿಸಿಐ ಪುರುಷರ ತಂಡದ ಆಯ್ಕೆಗಾರರ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ಬುಮ್ರಾಗೆ ಮತ್ತೆ ಆಡಲು ಹಸಿರು ನಿಶಾನೆ ತೋರುವ ಮೊದಲು ಆಡಿ ಹೊಗಲಿದ್ದಾರೆ.
2022 ರ ಸೆಪ್ಟೆಂಬರ್ನಲ್ಲಿ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಬಂದಿದ್ದಾಗ ಆಡಿದ ಪಂದ್ಯವೇ ಕೊನೆಯದಾಗಿತ್ತು. ಇದಾದ ನಂತರ ಗಾಯಗೊಂಡ ಅವರು ಶಸ್ತ್ರಚಿಕಿತ್ಸೆಗೆ ಒಳಗಾದದರು. ಹೀಗಾಗಿ 2023ರ ಇಂಡಿಯನ್ ಪ್ರೀಮಿಯರ್ ಲೀಗ್ನಿಂದಲೂ ಸಂಪೂರ್ಣ ಹೊರಗುಳಿದಿದ್ದರು. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲೂ ಅವರು ಕಾಣಿಸಿಕೊಂಡಿರಲಿಲ್ಲ. ಜುಲೈ 1 ರಿಂದ 5 ವರೆಗೆ 2022ರಲ್ಲಿ ಇಂಗ್ಲೆಂಡ್ನ ಎಡ್ಜಬಸ್ಟನ್ನಲ್ಲಿ ನಡೆದ ಟೆಸ್ಟ್ ಬುಮ್ರಾ ಆಡಿದ ಕೊನೆಯ ಟೆಸ್ಟ್ ಪಂದ್ಯವಾದರೆ, ಅದೇ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ನಲ್ಲಿ ಕೊನೆಯ ಏಕದಿನ ಪಂದ್ಯವನ್ನು ಜುಲೈ 14 ರಂದು ಆಡಿದ್ದಾರೆ. ಹೀಗಾಗಿ ಬುಮ್ರಾ ವೈಟ್ ಜರ್ಸಿಯಲ್ಲಿ ಹಾಗೂ ರೆಡ್ ಬಾಲ್ನಲ್ಲಿ ಕ್ರಿಕೆಟ್ ಆಡಿ ಒಂದು ವರ್ಷವೇ ಕಳೆದಿದೆ.
ಟೀಂ ಇಂಡಿಯಾ ಪರ ಬುಮ್ರಾ ಬೌಲಿಂಗ್ ಸಾಧನೆ: ಭಾರತ ಪರ 30 ಟೆಸ್ಟ್‌ಗಳನ್ನು ಆಡಿರುವ ಬುಮ್ರಾ 128 ವಿಕೆಟ್‌ಗಳನ್ನು ಪಡೆದು, 8 ಬಾರಿ 5ಕ್ಕೂ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. 72 ಏಕದಿನ ಪಂದ್ಯಗಳಲ್ಲಿ 121 ಹಾಗೂ 60 ಟಿ - ಟ್ವೆಂಟಿಯಲ್ಲಿ 70 ವಿಕೆಟ್ ತೆಗೆದು ಮಿಂಚಿದ್ದಾರೆ. ಇನ್ನು ಐಪಿಎಲ್ನಲ್ಲೂ ತನ್ನ ಖದರ್ ತೋರಿರುವ ಬುಮ್ರಾ 120 ಪಂದ್ಯಗಳಲ್ಲಿ 145 ವಿಕೆಟ್ ಕಬಳಿಸಿದ್ದಾರೆ.
ಈ ವರ್ಷದ ಕೊನೆಯಲ್ಲಿ ಎಂದರೆ ಅಕ್ಟೋಬರ್ ಮತ್ತು ನವೆಂಬರ್ ವೇಳೆಗೆ ಭಾರತದಲ್ಲಿ ವಿಶ್ವಕಪ್ ಆಯೋಜನೆ ಆಗಿದ್ದು, ವೇಳಾಪಟ್ಟಿ ಕೂಡ ಪ್ರಕಟವಾಗಿದೆ. ಇದಕ್ಕೂ ಮುನ್ನ ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ಹೈಬ್ರಿಡ್ ಮಾದರಿಯ ಏಕದಿನ ಏಷ್ಯಾಕಪ್ ನಡೆಯಲಿದೆ. ಇದಕ್ಕೂ ಮುನ್ನ ಬುಮ್ರಾ ತಂಡಕ್ಕೆ ಸೇರುತ್ತಿದ್ದಾರೆ. ವಿಶ್ವಕಪ್ ವೇಳೆಗೆ ಸಂಪೂರ್ಣ ಫಾರ್ಮ್ನಲ್ಲಿದ್ದರೆ ತಂಡ ಬಲಿಷ್ಠವಾಗಲಿದೆ.
ಇದನ್ನೂ ಓದಿ : Jasprit Bumrah: ಟೀಂ ಇಂಡಿಯಾಗೆ ಜಸ್ಪ್ರೀತ್ ಬುಮ್ರಾ ಪುನರಾಗಮನ ನಿರೀಕ್ಷೆ: ಎನ್ಸಿಎಯಲ್ಲಿ ಪ್ರತಿದಿನ 7 ಓವರ್ ಪ್ರಾಕ್ಟಿಸ್