ನವದೆಹಲಿ: ವೇತನ ನೀಡಿಲ್ಲ ಎಂದು ಪಿಸಿಬಿ ವಿರುದ್ಧ ಜೇಮ್ಸ್ ಫಾಕ್ನರ್ ಮಾಡಿರುವ ಆರೋಪವನ್ನು ತಳ್ಳಿ ಹಾಕಿರುವ ಪಿಸಿಬಿ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್, ಆಸ್ಟ್ರೇಲಿಯನ್ ಆಲ್ರೌಂಡರ್ರನ್ನು ಪಿಎಸ್ಎಲ್ ನಿಂದ ಅಜೀವ ನಿಷೇಧ ಹೇರಿದೆ.
ಪಿಸಿಬಿ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್ ಫ್ರಾಂಚೈಸಿಗೆ ಜೇಮ್ಸ್ ಫಾಕ್ನರ್ ಅವರ ಖಂಡನೀಯವಾದ ನಡವಳಿಕೆಯಿಂದ ತುಂಬಾ ನಿರಾಸೆಯಾಗಿದೆ. ಫಾಕ್ನರ್ ಅವರನ್ನು ಸೇರಿದಂತೆ ಟೂರ್ನಿಯ ಭಾಗವಾಗಿರುವ ಎಲ್ಲಾ ವಿದೇಶಿ ಆಟಗಾರರನ್ನು ಅತ್ಯಂತ ಗೌರವಯುತವಾಗಿ ನೋಡಿಕೊಳ್ಳುತ್ತಿದ್ದೇವೆ. 7 ವರ್ಷಗಳ ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಯಾವುದೇ ಆಟಗಾರ ಪಿಸಿಬಿಯ ಹಣಕಾಸಿನ ಒಪ್ಪಂದದ ಬಗ್ಗೆ ಯಾವುದೇ ದೂರು ನೀಡಿಲ್ಲ ಎಂದು ಪಿಸಿಬಿ ಹೇಳಿಕೆ ಬಿಡುಗಡೆ ಮಾಡಿದೆ.
ಜೇಮ್ಸ್ ಫಾಕ್ನರ್ ಅವರ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಬೋರ್ಡ್, ಕಳೆದ ಡಿಸೆಂಬರ್ನಲ್ಲಿ ನಾವು ಫಾಕ್ನರ್ ಅವರ ಏಜೆಂಟ್ ನೀಡಿದ್ದ ಯುಕೆ ಮೂಲದ ಬ್ಯಾಂಕ್ ಖಾತೆಗೆ ಒಪ್ಪಂದದ ಹಣವನ್ನು ವರ್ಗಾಯಿಸಿದ್ದೇವೆ. ಒಪ್ಪಂದದ ಪ್ರಕಾರ ಟೂರ್ನಿಗೂ ಮುನ್ನ ಶೇ.70 ರಷ್ಟನ್ನು ನೀಡಲಾಗಿದೆ. ಟೂರ್ನಿ ಮುಗಿದ 40 ದಿನಗಳ ನಂತರ ಉಳಿದ 30 ಭಾಗವನ್ನು ನೀಡಲಾಗುವುದು ಎಂದು ಒಪ್ಪಂದದ ವೇಳೆ ತಿಳಿಸಲಾಗಿತ್ತು ಎಂದು ವಿವರಣೆ ನೀಡಿದೆ.
ಮೊದಲು ಯುಕೆ ಬ್ಯಾಂಕ್ ಖಾತೆ ನೀಡಿದ್ದ ಅವರು ನಂತರ ಆಸ್ಟ್ರೇಲಿಯಾದ ಬ್ಯಾಂಕ್ ಖಾತೆಯ ದಾಖಲೆಯನ್ನು ನೀಡಿ ಈ ಖಾತೆಗೆ ಹಣ ಹಾಕುವಂತೆ ಬೇಡಿಕೆಯಿಟ್ಟಿದ್ದರು. ಅಂದರೆ ಶೇ.70 ರಷ್ಟನ್ನು 2ನೇ ಬಾರಿ ನೀಡಬೇಕೆಂಬುದು ಅವರ ಬೇಡಿಕೆಯಾಗಿತ್ತು.
ಈ ಕುರಿತು ಶುಕ್ರವಾರ ಚರ್ಚೆ ನಡೆಸುವ ವೇಳೆ ತಮ್ಮ ಬೇಡಿಕೆಯ ಹಣವನ್ನು ನೀಡುವವರೆಗೆ ಮುಲ್ತಾನ್ ಸುಲ್ತಾನ್ ವಿರುದ್ಧದ ಪಂದ್ಯವನ್ನು ಆಡುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದರು. ಕೊನೆಗೆ ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಅವರು ಆಡದಿರಲು ನಿರ್ಧರಿಸಿ ಅವರ ತಂಡದ ಸೋಲಿಗೆ ಕಾರಣರಾದರಲ್ಲದೆ. ತಮ್ಮ ಪ್ರಯಾಣದ ವ್ಯವಸ್ಥೆ ಮಾಡುವಂತೆ ಬೇಡಿಕೆಯಿಟ್ಟರು.
ಶನಿವಾರ ಅವರು ಪಾಕಿಸ್ತಾನವನ್ನು ಬಿಡುವ ಮೊದಲು ಉಳಿದುಕೊಂಡಿದ್ದ ಹೋಟೆಲ್ನಲ್ಲಿ ಹಲವು ವಸ್ತುಗಳನ್ನು ಉದ್ದೇಶಪೂರ್ವಕವಾಗಿ ಹಾನಿಯುಂಟು ಮಾಡಿದರು. ಪರಿಣಾಮ ಹಾನಿಯಾದ ವಸ್ತುಗಳಿಗೆ ಪರಿಹಾರವನ್ನು ಕಟ್ಟಿದ್ದಾರೆ. ಇದಲ್ಲದೆ ಅವರು ವಿಮಾನ ನಿಲ್ದಾಣದಲ್ಲೂ ಇಮಿಗ್ರೇಷನ್ ಅಧಿಕಾರಿಗಳೊಂದಿಗೆ ಕೂಡ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ದೂರನ್ನು ಕೂಡ ಪಿಸಿಬಿ ಸ್ವೀಕರಿಸಿದೆ ಎಂದು ಪಿಸಿಬಿ ಸುದೀರ್ಘ ಹೇಳಿಕೆಯಲ್ಲಿ ತಿಳಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಫಾಕ್ನರ್ ಟ್ವೀಟ್ ಮಾಡುವ ಮೂಲಕ ಪಿಸಿಬಿ, ಪಿಎಸ್ಎಲ್ ಮತ್ತು ಪಾಕಿಸ್ತಾನ ಕ್ರಿಕೆಟ್ಗೆ ಅಪಖ್ಯಾತಿ ತರುವ ಪ್ರಯತ್ನ ಮಾಡಿರುವುದಕ್ಕೆ ಜೇಮ್ಸ್ ಫಾಕ್ನರ್ ಅವರ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಎಲ್ಲಾ ಫ್ರಾಂಚೈಸಿಗಳ ಅನುಮತಿಯ ಮೇರೆಗೆ ಅವರನ್ನು ಭವಿಷ್ಯದ ಪಾಕಿಸ್ತಾನ ಸೂಪರ್ ಲೀಗ್ನಿಂದ ನಿಷೇಧ ಹೇರಲಾಗಿದೆ ಎಂದು ಪಿಸಿಬಿ ಮತ್ತು ಪಿಎಸ್ಎಲ್ ತಿಳಿಸಿದೆ.
ಇದನ್ನೂ ಓದಿ:ವೇತನ ಪಾವತಿಸದ ಪಿಸಿಬಿ.. ಕೋಪಗೊಂಡು ಅರ್ಧಕ್ಕೆ PSL ತ್ಯಜಿಸಿ ತವರಿಗೆ ಮರಳಿದ ಜೇಮ್ಸ್ ಫಾಕ್ನರ್!!