ಬೆಂಗಳೂರು: ಭಾರತದ ಉದಯೋನ್ಮುಖ ಬ್ಯಾಟರ್ ಶ್ರೇಯಸ್ ಅಯ್ಯರ್ ತಂಡದಿಂದ ಹೊರಬಿದ್ದಿರುವ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಅಂತಹ ಬ್ಯಾಟರ್ಗಳ ಜಾಗದಲ್ಲಿ ಖಾಯಂ ಸ್ಥಾನ ಪಡೆದುಕೊಳ್ಳಲು ಇನ್ನೂ ಸಾಕಷ್ಟು ಕಠಿಣವಾಗಿ ಶ್ರಮಿಸಿಬೇಕಿದೆ ಎಂದು ನಾಯಕ ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧ 2-0ಯಲ್ಲಿ ಟೆಸ್ಟ್ ಸರಣಿ ಗೆದ್ದ ನಂತರ ಹೇಳಿದ್ದಾರೆ.
ಬ್ಯಾಟರ್ಗಳಿಗೆ ಸವಾಲಾಗಿದ್ದ ಪಿಚ್ನಲ್ಲಿ ಅತ್ಯುತ್ತಮವಾಗಿ ಬ್ಯಾಟ್ ಬೀಸಿದ ಅಯ್ಯರ್ ಎರಡೂ ಇನ್ನಿಂಗ್ಸ್ನಲ್ಲಿ ನಿರ್ಣಾಯಕ 92 ಮತ್ತು 67 ರನ್ಗಳಿಸಿ ತಂಡ ಸವಾಲಿನ ಮೊತ್ತ ದಾಖಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ಪಂದ್ಯದ ನಂತರ ಸರಣಿಯಲ್ಲಿ ಮಿಂಚಿದ ಆಟಗಾರರನ್ನು ಶ್ಲಾಘಿಸಿದ ರೋಹಿತ್, ಹಿರಿಯ ಬ್ಯಾಟರ್ಗಳ ಜಾಗದಲ್ಲಿ ಬ್ಯಾಟ್ ಬೀಸಿ ಯಶಸ್ವಿಯಾದ ಅಯ್ಯರ್ ಅವರ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ನೀಡಿದ ಪ್ರದರ್ಶನವನ್ನೇ ಶ್ರೇಯಸ್ ಟೆಸ್ಟ್ ತಂಡದಲ್ಲೂ ಮುಂದುವರಿಸಿದ್ದಾರೆ. ಅವರಿಗೆ ತಂಡದಲ್ಲಿ ರಹಾನೆ ಮತ್ತು ಪೂಜಾರ ಅವರ ಸ್ಥಾನವನ್ನು ತುಂಬುವುದಕ್ಕೆ ಸಾಕಷ್ಟು ಪರಿಶ್ರಮ ಪಡಬೇಕು ಎಂಬುದರ ಅರಿವಿದೆ. ಆದರೆ ಪ್ರಸ್ತುತ ಅವರು ಆ ಸ್ಥಾನವನ್ನು ತುಂಬಲು ಅಗತ್ಯವಾಗಿರುವ ಎಲ್ಲಾ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರು ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ ಎಂದು ರೋಹಿತ್ ಹೇಳಿದ್ದಾರೆ.
ಮತ್ತೊಬ್ಬ ಯುವ ಬ್ಯಾಟರ್ ಪಂತ್ ಬಗ್ಗೆ ಮಾತನಾಡುತ್ತಾ, ಪಂತ್ ತಾವಾಡುವ ಪ್ರತಿಯೊಂದು ಪಂದ್ಯದಲ್ಲೂ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಅದರಲ್ಲೂ ಇಂತಹ ಪರಿಸ್ಥಿತಿಯಲ್ಲಿ ಅವರ ಆಟ ಇನ್ನೂ ಅದ್ಭುತವಾಗಿರುತ್ತದೆ. ಕಳೆದ ವರ್ಷ ಇಂಗ್ಲೆಂಡ್ ಸರಣಿಯಲ್ಲಿ ನಾವು ನೋಡಿದ್ದೆವು, ಇದೀಗ ಮತ್ತೆ ಅದೇ ಪ್ರದರ್ಶನ ಕಂಡಿದ್ದೇವೆ. ಅವರಿಗೆ ಇಷ್ಟ ಬಂದ ರೀತಿಯಲ್ಲಿ ಬ್ಯಾಟಿಂಗ್ ಮಾಡಲು ನಾವು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ಕ್ಯಾಚ್ ಪಡೆಯುವುದು ಮತ್ತು ಸ್ಟಂಪ್ ಮಾಡಿದ್ದನ್ನು ನೋಡಿದಾಗ ವಿಕೆಟ್ ಕೀಪಿಂಗ್ನಲ್ಲಿ ಆತನ ಪ್ರಬುದ್ಧತೆ ತೋರಿಸುತ್ತದೆ ಎಂದು ಹಿಟ್ಮ್ಯಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಅಹರ್ನಿಶಿ ಟೆಸ್ಟ್ ಪಂದ್ಯವನ್ನು ಭಾರತ 238ರನ್ಗಳಿಂದ ಗೆಲ್ಲುವ ಮೂಲಕ ಟೆಸ್ಟ್ ಸರಣಿಯಲ್ಲಿ 2-0ಯಲ್ಲಿ ತನ್ನದಾಗಿಸಿಕೊಂಡಿತು. ಅಯ್ಯರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ರಿಷಭ್ ಪಂತ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ಇದನ್ನೂ ಓದಿ:ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ : ಶ್ರೀಲಂಕಾ ವಿರುದ್ಧ ಭಾರತ ಸರಣಿ ಗೆದ್ದ ನಂತರ ಅಂಕಪಟ್ಟಿ ಹೀಗಿದೆ..