ಹೈದರಾಬಾದ್: ಟಿ20 ವಿಶ್ವಕಪ್ನ ಕೊನೆಯ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲವು ಪಡೆಯುವ ಮೂಲಕ ಟೂರ್ನಿಗೆ ಅಂತ್ಯ ಹಾಡಿತು. ಇದು ಕ್ಯಾಪ್ಟನ್ ಕೊಹ್ಲಿಗೆ ಕೊನೇಯ ಟಿ20 ನಾಯಕತ್ವದ ಪಂದ್ಯವಾಗಿತ್ತು. ಇದರ ನಂತರ ಅಧಿಕೃತವಾಗಿ ಅವರು ಟಿ20 ನಾಯಕತ್ವ ಸ್ಥಾನದಿಂದ ಕೆಳಗಿಳಿದರು.
ಈ ಬಗ್ಗೆ ಖಾಸಗಿ ಮಾಧ್ಯಮದಲ್ಲಿ ಮಾತನಾಡಿರುವ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್, ಟಿ20ಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಪ್ರಯಾಣಕ್ಕೆ ಉತ್ತಮ ಅಂತ್ಯ ಪಡೆಯಲು ಸಾಧ್ಯವಾಗದಿದ್ದರೂ, ಅವರು ನಾಯಕನಾಗಿ ಮಾಡಿದ ದಾಖಲೆಗಳು ಮತ್ತು ಬ್ಯಾಟಿಂಗ್ನಲ್ಲಿ ಮಾಡಿದ ಸಾಧನೆ ಅಜರಾಮರ. ಟಿ20 ಫಾರ್ಮೆಟ್ ಬ್ಯಾಟಿಂಗ್ನಲ್ಲಿ ವಿರಾಟ್ ತಮ್ಮದೆ ಶೈಲಿಯ ಸ್ಥಿರತೆ ಹೊಂದಿದ್ದಾರೆ. ಟಿ20ಯಲ್ಲಿ ಅವರ ಸ್ಥಾನವನ್ನು ಪ್ರಶ್ನಿಸುವುದು ಸರಿಯಲ್ಲ ಎಂದರು.
“ಎಷ್ಟೇ ಯುವ ಆಟಗಾರರು ಬಂದರೂ ಮತ್ತೊಬ್ಬ ವಿರಾಟ್ ಕೊಹ್ಲಿಯನ್ನು ಪಡೆಯಲಾಗದು. ಅವರು ಉತ್ತಮ ರೀತಿಯ ಸ್ಥಿರತೆಯೊಂದಿಗೆ ಬ್ಯಾಟ್ ಮಾಡುತ್ತಾರೆ. ಹೀಗಾಗಿ ಕೊಹ್ಲಿ ಸ್ಥಾನವನ್ನು ಪ್ರಶ್ನಿಸುವುದು ಸರಿಯಲ್ಲ. ಅವರು ಬಯಸಿದಷ್ಟು ಕಾಲ ಟಿ20 ಆಡುವುದನ್ನು ಮುಂದುವರಿಸಲಿ'' ಎಂದರು.
ಈ ಬಗ್ಗೆ ಭಾರತದ ಮಾಜಿ ವೇಗಿ ಆಶಿಶ್ ನೆಹ್ರಾ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, 3ನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿಗಿಂತ ಉತ್ತಮವಾಗಿ ಬ್ಯಾಟಿಂಗ್ ಮಾಡುವವರು ಸಿಗುವುದಿಲ್ಲ. ಅವರು ನೀಡುವ ಸ್ಥಿರ ಪ್ರದರ್ಶನವು ಭಾರತ ತಂಡಕ್ಕೆ ಶಕ್ತಿ. ಅವರ ಅನುಭವದ ಬ್ಯಾಟಿಂಗ್ನಿಂದ ಯುವ ಆಟಗಾರರು ಕಲಿಯುವುದು ಸಾಕಷ್ಟಿದೆ ಎಂದು ಹೇಳಿದರು.