ಬೆಂಗಳೂರು: ಬೆನ್ನುನೋವಿನಿಂದ ಬಳಲುತ್ತಿರುವ ಭಾರತೀಯ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಈಗ ಗಾಯದಿಂದ ಚೇತರಿಸಿಕೊಂಡಿದ್ದು, ಏಷ್ಯಾಕಪ್‌ಗಾಗಿ ಭಾರತ ತಂಡಕ್ಕೆ ಮರಳಿದ್ದಾರೆ. ಭಾರತದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಅವರಿಗೆ ವಿಪರೀತ ಬೆನ್ನು ನೋವಿನಿಂದ ಬಳಲುತ್ತಿದ್ದರು. ಇದರಿಂದಾಗಿ ಅವರು ತಮ್ಮ ವೃತ್ತಿಜೀವನದ ಬಗ್ಗೆ ಚಿಂತಿಸುತ್ತಿದ್ದರು. ಆಪರೇಷನ್‌ಗೂ ಮುನ್ನ ಶ್ರೇಯಸ್ ನೋವಿನಿಂದ ನೊಂದುಕೊಳ್ಳುತ್ತಿದ್ದರು.
ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ವೈದ್ಯರು ಸಲಹೆ: ಗಾಯದ ದಿನಗಳಲ್ಲಿ ತಮ್ಮ ಹೋರಾಟ ನೆನಪಿಸಿಕೊಂಡ ಶ್ರೇಯಸ್ ಅಯ್ಯರ್, ಸ್ಲಿಪ್ ಡಿಸ್ಕ್ ಸಮಸ್ಯೆಯಿಂದಾಗಿ ನಾನು ತುಂಬಾನೇ ನೋವು ಅನುಭವಿಸಿದೆ. ನನಗೆ ಅದು ಭಯಾನಕ ಸಮಯವಾಗಿತ್ತು. ಇದು ಅಸಹನೀಯ ನೋವು ಮತ್ತು ನಾನು ಏನು ಅನುಭವಿಸುತ್ತಿದ್ದೇನೆ ಎಂದು ನನಗೆ ಆಗ ಅರ್ಥವಾಗಲಿಲ್ಲ. ಬಳಿಕ ನಾನು ಆಪರೇಷನ್ ಮಾಡಿಸಿಕೊಳ್ಳಬೇಕು ಎಂದು ನಾನು ಅರಿತುಕೊಂಡೆ. ಆಪರೇಷನ್ ಮಾಡಿಸಿಕೊಳ್ಳುವುದು ಬಹಳ ಮುಖ್ಯ ಎಂದು ವೈದ್ಯರು ಹೇಳಿದರು.
ಸಹ ಆಟಗಾರರಿಗೆ ಧನ್ಯವಾದ ಅರ್ಪಿಸಿದ ಅಯ್ಯರ್: ಕ್ರಿಕೆಟ್ ಆಡಲು ಇನ್ನೂ ಬಹಳ ಸಮಯ ಇರುವುದರಿಂದ ಆಪರೇಷನ್ ಮಾಡಿಸಿಕೊಳ್ಳುವ ನಿರ್ಧಾರ ಸೂಕ್ತವೆನಿಸಿತು. ಆದ್ದರಿಂದ ನಾನು ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಉತ್ತಮ ನಿರ್ಧಾರ ಎಂದು ನಾನು ಭಾವಿಸಿದೆ. ನಾನು ತೆಗೆದುಕೊಂಡ ನಿರ್ಧಾರದಿಂದ ನಾನು ನಿಜವಾಗಿಯೂ ಸಂತೋಷಗೊಂಡಿದ್ದೇನೆ. ಶಸ್ತ್ರಚಿಕಿತ್ಸೆಯ ನಂತರ, ಇದು ತುಂಬಾ ಒಳ್ಳೆಯ ನಿರ್ಧಾರ ಎಂದು ಶಸ್ತ್ರಚಿಕಿತ್ಸಕರು ಹೇಳಿದರು ಅಂತಾ ಅಯ್ಯರ್ ಹೇಳಿದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ತನ್ನ ಕಠಿಣ ಸಮಯದಲ್ಲಿ ತನ್ನೊಂದಿಗೆ ನಿಂತಿದ್ದ ತನ್ನ ಸಹ ಆಟಗಾರರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಮರಳಿ ತಂಡವನ್ನು ಸೇರುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.
ಅಯ್ಯರ್‌ಗೆ ಕಾಡತೊಡಗಿತು ವೃತ್ತಿಜೀವನದ ಭಯ: ಅಯ್ಯರ್ ಅವರು ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಭಾರತಕ್ಕಾಗಿ ತಮ್ಮ ಕೊನೆಯ ಪಂದ್ಯ ಆಡಿದರು. ಇದರ ನಂತರ, ಗಾಯದ ಕಾರಣ ಐಪಿಎಲ್ 2023 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಮುನ್ನಡೆಸಲು ಸಾಧ್ಯವಾಗಲಿಲ್ಲ. ಬೆನ್ನು ನೋವಿನಿಂದಾಗಿ ಅವರಿಗೆ ತಮ್ಮ ಮುಂದಿನ ವೃತ್ತಿಜೀವನದ ಭಯ ಕಾಡುತ್ತಿತ್ತು. ಶಸ್ತ್ರಚಿಕಿತ್ಸೆ ನಂತರ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಕಳೆದ ದಿನಗಳು ನನಗೆ ಕಠಿಣ ಪರೀಕ್ಷೆ ಎದುರಾಯ್ತು ಎಂದು ಅಯ್ಯರ್ ಹೇಳಿದರು.
ಫಿಸಿಯೋ ಮತ್ತು ತರಬೇತುದಾರರು ನನ್ನ ಬಲವಾದ ಪುನರಾಗಮನದ ಬಗ್ಗೆ ಖಚಿತವಾಗಿದ್ದರು. ಆದರೆ, ನನ್ನ ಮನಸ್ಸಿನಲ್ಲಿ ನಾನು ನೋವನ್ನು ಅನುಭವಿಸುತ್ತಿದ್ದೆ. ಆಗ ನಾನು ಪರೀಕ್ಷೆಯಲ್ಲಿ ತೇರ್ಗಡೆಯಾಗಬಹುದೇ ಅಥವಾ ಇಲ್ಲವೇ ಎಂದು ನನಗೆ ಖಚಿತವಾಗಿರಲಿಲ್ಲ. ಆದರೆ ಸ್ವಲ್ಪ ಸಮಯದ ನಂತರ ನೋವು ಕಡಿಮೆಯಾಗಲು ಪ್ರಾರಂಭಿಸಿದಾಗ ನನ್ನ ಕಾಲಿನ ಶಕ್ತಿಯು ಮರಳಲು ಪ್ರಾರಂಭಿಸಿತು ಎಂದು ಅಯ್ಯರ್ ವಿವರಿಸಿದರು.
ಮುಂಬರುವ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಏಷ್ಯಾ ಕಪ್‌ನಲ್ಲಿ ಬಲವಾದ ಪುನರಾಗಮನ ಮಾಡಲು ಅಯ್ಯರ್ ಬಯಸಿದ್ದಾರೆ. ನಾನು ನನ್ನ ಸಹ ಆಟಗಾರರೊಂದಿಗೆ ಎರಡು ದಿನಗಳ ಕಾಲ ಚೆನ್ನಾಗಿ ಅಭ್ಯಾಸ ಮಾಡಿದ್ದು, ಅದು ಸ್ಪರ್ಧಾತ್ಮಕವಾಗಿತ್ತು. ಹಾಗಾಗಿ ಇದೀಗ ಪ್ರತಿ ಕ್ಷಣವನ್ನು ಆನಂದಿಸಲು ನನಗೆ ಸಂತೋಷವಾಗಿದೆ ಎಂದರು. ಏಷ್ಯಾ ಕಪ್‌ಗೆ ಆಯ್ಕೆಯಾದ ಭಾರತ ತಂಡ ಪ್ರಸ್ತುತ ಬೆಂಗಳೂರಿನಲ್ಲಿ ಅಭ್ಯಾಸ ಶಿಬಿರದಲ್ಲಿ ಭಾಗವಹಿಸುತ್ತಿದೆ. ಏಷ್ಯಾಕಪ್‌ನಲ್ಲಿ ಭಾರತದ ಮೊದಲ ಪಂದ್ಯವು ಸೆಪ್ಟೆಂಬರ್ 2 ರಂದು ಪಾಕಿಸ್ತಾನದ ವಿರುದ್ಧ ನಡೆಯಲಿದೆ.
ಓದಿ: ಮಹಾರಾಜ ಟ್ರೋಫಿ: ಬೆಂಗಳೂರು ವಿರುದ್ಧ ಗೆದ್ದು ಸೆಮಿಫೈನಲ್ ಸ್ಥಾನ ಗಿಟ್ಟಿಸಿದ ಶಿವಮೊಗ್ಗ