ಧರ್ಮಶಾಲಾ : ನಿನ್ನೆ ನಡೆದ ಶ್ರೀಲಂಕಾ ವಿರುದ್ಧದ 2ನೇ ಟಿ-20 ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್ ಇಶಾನ್ ಕಿಶಾನ್ ತಲೆಗೆ ಚೆಂಡು ಬಡಿದು ಪೆಟ್ಟು ಬಿದ್ದ ಕಾರಣ ಅವರನ್ನು ತಕ್ಷಣವೇ ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ, ಕಿಶನ್ರನ್ನು ಬ್ರೈನ್ ಸ್ಕ್ಯಾನ್‌ಗೆ ಒಳಪಡಿಸಲಾಗಿದೆ.
ಶ್ರೀಲಂಕಾದ ಬೌಲರ್ ಲಹಿರು ಕುಮಾರ್ ಎಸೆದ ಬೌನ್ಸರ್ ಅನ್ನು ಗುರುತಿಸುವಲ್ಲಿ ವಿಫಲರಾದ ಇಶಾನ್ ತಲೆಗೆ ಬಲವಾಗಿ ಬಡಿದಿದೆ. ಪೆಟ್ಟಿನಿಂದ ಇಶಾನ್ ಕಿಶನ್ ಕೆಲ ಹೊತ್ತು ನರಳಾಡಿದ್ದಾರೆ.
ಈ ವೇಳೆ ಮೈದಾನದಲ್ಲಿ ಆತಂಕದ ವಾತಾವರಣ ಉಂಟಾಯಿತು. ಭಾರತದ ವೈದ್ಯಕೀಯ ತಂಡ ತಪಾಸಣೆ ನಡಸಿದ ಬಳಿಕ ಕಿಶನ್ ಸುಧಾರಿಸಿಕೊಂಡು ಮತ್ತೆ ಬ್ಯಾಟಿಂಗ್ಗೆ ಇಳಿದರು.
ಪಂದ್ಯ ಮುಗಿದ ಬಳಿಕ ಇಶಾನ್ ಕಿಶನ್ರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಗೆ ದಾಖಲಿಸಿ, ಬ್ರೈನ್ ಸ್ಕ್ಯಾನ್ ಒಳಪಡಿಸಲಾಗಿದೆ. ಇಂದು ವರದಿ ಬರಲಿದೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೇ, ಅಂತಿಮ ಪಂದ್ಯದಲ್ಲಿ ಇಶಾನ್ ಕಿಶನ್ರಿಗೆ ವಿಶ್ರಾಂತಿ ನೀಡಿ ಅವರ ಬದಲಾಗಿ ಮಯಾಂಕ್ ಅಗರ್ವಾಲ್ ಅಥವಾ ವೆಂಕಟೇಶ್ ಅಯ್ಯರ್ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಈ ಹಿಂದೆ ಆಸ್ಟ್ರೇಲಿಯಾದ ಆಟಗಾರ ಫಿಲ್ ಹ್ಯೂಸ್ಗೂ ಕೂಡ ಬೌನ್ಸರ್ ಎಸೆತದಿಂದ ತಲೆಗೆ ಗಂಭೀರ ಪೆಟ್ಟು ಬಿದ್ದು ಮೃತಪಟ್ಟ ಕಹಿ ಘಟನೆ ನಡೆದಿತ್ತು.
ಸರಣಿಗೂ ಮುನ್ನ ಭಾರತದ ಬ್ಯಾಟರ್‌ಗಳಾದ ಋತುರಾಜ್ ಗಾಯಕ್‌ವಾಡ್ ಮತ್ತು ಸೂರ್ಯಕುಮಾರ್ ಯಾದವ್ ಮತ್ತು ವೇಗಿ ದೀಪಕ್ ಚಹರ್ ಗಾಯಗೊಂಡು ಸರಣಿಯಿಂದ ಹೊರಗುಳಿದಿದ್ದಾರೆ. ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 2-0 ಅಂತರದಲ್ಲಿ ಸರಣಿ ಜಯಿಸಿದೆ.
ಓದಿ: 24 ವರ್ಷಗಳ ನಂತರ ಪಾಕಿಸ್ತಾನಕ್ಕೆ ಆಗಮಿಸಿದ ಆಸ್ಟ್ರೇಲಿಯಾ ಕ್ರಿಕೆಟ್ ಟೀಂ!