ಜಮೈಕಾ: ವೆಸ್ಟ್ ಇಂಡೀಸ್ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ 2 ವಿಕೆಟ್ಗಳ ರೋಚಕ ಜಯ ಸಾಧಿಸುವ ಮೂಲಕ ಐರ್ಲೆಂಡ್ ಇದೇ ಮೊದಲ ಬಾರಿಗೆ ಐಸಿಸಿ ಸಂಪೂರ್ಣ ಸದಸ್ಯತ್ವ ಹೊಂದಿರುವ ರಾಷ್ಟ್ರದ ವಿರುದ್ಧ ಸರಣಿ ಜಯಿಸಿತು.
ಜಮೈಕಾದ ಸಬಿನಾ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಸರಣಿ ನಿರ್ಣಯಿಸುವ ಕೊನೆಯ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ಕೇವಲ 212 ರನ್ಗಳಿಗೆ ಆಲೌಟ್ ಆಯಿತು. ಜೇಸನ್ ಹೋಲ್ಡರ್ 44, ಶಾಯ್ ಹೋಪ್ 53 ರನ್, ಒಡೆನ್ ಸ್ಮಿತ್ 20 ಹಾಗು ಅಕೀಲ್ ಹುಸೇನ್ 23 ರನ್ಗಳಿಸಿದ್ದರು.
ನಾಯಕ ಕೀರನ್ ಪೊಲಾರ್ಡ್(3), ಆಲ್ರೌಂಡರ್ ರಾಸ್ಟನ್ ಚೇಸ್(19), ಪೂರನ್(2) ರಂತಹ ಪ್ರಮುಖ ಬ್ಯಾಟರ್ಗಳೇ ಐರ್ಲೆಂಡ್ ಬೌಲಿಂಗ್ ಮುಂದೆ ರನ್ಗಳಿಸಲಾಗದೆ ಪರದಾಡಿ ವಿಕೆಟ್ ಒಪ್ಪಿಸಿದರು.
ಐರ್ಲೆಂಡ್ ಪರ ಕ್ರೈಗ್ ಯಂಗ್ 43ಕ್ಕೆ3, ಆ್ಯಂಡಿ ಮೆಕ್ಬ್ರೈನ್ 28ಕ್ಕೆ4, ಕರ್ಟಿಸ್ ಕ್ಯಾಂಫರ್ ಮತ್ತು ಡಾಕ್ರೆಲ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು. 213 ರನ್ ಗುರಿ ಬೆನ್ನತ್ತಿದ ಐರ್ಲೆಂಡ್ 44.5 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಗುರಿ ತಲುಪಿ ಐತಿಹಾಸಿಕ ಸರಣಿ ಜಯಿಸಿತು. ನಾಯಕ ಪಾಲ್ ಸ್ಟಿರ್ಲಿಂಗ್ 38 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್‌ಸಹಿತ 44, ಆ್ಯಂಡಿ ಮೆಕ್ಬ್ರೈನ್ 100 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 59, ಹ್ಯಾರಿ ಟೆಕ್ಟರ್ 76 ಎಸೆತಗಳಲ್ಲಿ 52 ರನ್ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ವಿಂಡೀಸ್ ಪರ ಚೇಸ್ 44ಕ್ಕೆ 3, ಅಕೀಲ್ ಹುಸೇನ್ 59ಕ್ಕೆ 3, ಒಡೆನ್ ಸ್ಮಿತ್ ಮತ್ತು ಅಲ್ಜಾರಿ ಜೋಸೆಫ್ 35ಕ್ಕೆ1 ವಿಕೆಟ್ ಪಡೆದರು.
ಮೊದಲ ಪಂದ್ಯವನ್ನು ವಿಂಡೀಸ್ ಗೆದ್ದರೆ, 2ನೇ ಮತ್ತು 3ನೇ ಪಂದ್ಯವನ್ನು ಐರ್ಲೆಂಡ್ ಗೆದ್ದು ಸರಣಿ ವಶಪಡಿಸಿಕೊಂಡಿತು.
ಇದನ್ನೂ ಓದಿ:ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಗೆ 146 ರನ್ಗಳ ಜಯ; 4-0 ಆ್ಯಶಸ್ ಗೆದ್ದ ಕಮಿನ್ಸ್ ಪಡೆ