ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಂಜಾಬ್ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಸ್ಪಿನ್ನರ್ ಯಜುವೇಂದ್ರ ಚಹಲ್ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಪಂದ್ಯದಲ್ಲಿ ಜಿತೇಂದ್ರ ಶರ್ಮಾರವನ್ನು ಔಟ್ ಮಾಡುವ ಮೂಲಕ ಐಪಿಎಲ್ನಲ್ಲಿ 171 ವಿಕೆಟ್ ಪಡೆದರು. ಈ ಮೂಲಕ ಶ್ರೀಲಂಕಾದ ಮಾಜಿ ಆಟಗಾರನ ದಾಖಲೆಯನ್ನು ಮುರಿದರು.
ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದ ಲಸಿತ್ ಮಾಲಿಂಗ 120 ಪಂದ್ಯಗಳಲ್ಲಿ 170 ವಿಕೆಟ್ ಪಡೆದು 2ನೇ ಸ್ಥಾನದಲ್ಲಿದ್ದರು. ಇದೀಗ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಯಜುವೇಂದ್ರ ಚಹಲ್ ಲಗ್ಗೆ ಇಟ್ಟಿದ್ದಾರೆ. ಈ ಪಟ್ಟಿಯಲ್ಲಿ ದೀರ್ಘಕಾಲದಿಂದ ನಂಬರ್ ಒನ್ ಆಗಿ ಡ್ವೇನ್ ಬ್ರಾವೋ ಅವರು ಮುಂದುವರಿದಿದ್ದಾರೆ. ಕೆರೆಬಿಯನ್ ಆಟಗಾರ 161 ಪಂದ್ಯಗಳಲ್ಲಿ 183 ವಿಕೆಟ್ ಗಳಿಸಿದ್ದಾರೆ.
ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಯಜುವೇಂದ್ರ ಚಹಲ್ 4 ಓವರ್‌ಗಳಲ್ಲಿ 50 ರನ್ ನೀಡಿ 1 ವಿಕೆಟ್ ಪಡೆದರು. 16ನೇ ಓವರ್ನ ನಾಲ್ಕನೇ ಎಸೆತದಲ್ಲಿ ಜಿತೇಶ್ ಶರ್ಮಾ ಅವರನ್ನು ಔಟ್ ಮಾಡಿ ಈ ಸಾಧನೆ ಮಾಡಿದರು.
ಬ್ರಾವೋ ದಾಖಲೆಯತ್ತ ಗುರಿ: 133 ಪಂದ್ಯವಾಡಿರುವ ಯಜುವೇಂದ್ರ ಚಹಲ್ ಅದ್ಭುತ ಲಯದಲ್ಲಿದ್ದಾರೆ. ಟೀಂ ಇಂಡಿಯಾ ಪರವಾಗಿಯೂ ಉತ್ತಮ ಬೌಲಿಂಗ್ ಸ್ಪೆಲ್ ಹೊಂದಿದ್ದಾರೆ. ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಡ್ವೇನ್ ಬ್ರಾವೋ 183 ವಿಕೆಟ್ ಗಳಿಸಿದ್ದಾರೆ. ಈ ದಾಖಲೆಯನ್ನು ಮೀರಲು ಚಹಲ್ಗೆ ಇನ್ನೂ 12 ವಿಕೆಟ್ ಬೇಕು. ಈ ಸೀಸನ್ನಲ್ಲಿ 2 ಪಂದ್ಯಗಳನ್ನು ಮಾತ್ರ ಆಡಿರುವ ಆಟಗಾರ ಈ ದಾಖಲೆ ಮುರಿಯಲು ಅದ್ಭುತ ಅವಕಾಶ ಹೊಂದಿದ್ದಾರೆ.
ಡ್ವೇನ್ ಬ್ರಾವೋ ಈಗಾಗಲೇ ಐಪಿಎಲ್ಗೆ ವಿದಾಯ ಹೇಳಿದ್ದು, ಚೆನ್ನೈ ಸೂಪರ್ಕಿಂಗ್ಸ್ ತಂಡದ ತರಬೇತುದಾರರ ತಂಡದಲ್ಲಿದ್ದಾರೆ. ಇದು ಚಹಲ್ಗೆ ವರದಾನವಾಗಿದೆ. ರಾಜಸ್ಥಾನ ರಾಯಲ್ಸ್ ತಂಡದ ಪ್ರಮುಖ ಸ್ಪಿನ್ನರ್ ಆಗಿರುವ ಚಹಲ್ ಅತಿಹೆಚ್ಚು ವಿಕೆಟ್ ಪಟ್ಟಿಯಲ್ಲಿ ಅಗ್ರಜನಾಗಲು ಅವಕಾಶವಿದೆ.
ಅಮಿತ್ ಮಿಶ್ರಾ ದಾಖಲೆ ಮುರಿದಿದ್ದ ಚಹಲ್: ಐಪಿಎಲ್ನಲ್ಲಿ ಯಶಸ್ವಿ ಬೌಲರ್‌ಗಳ ಸಾಲಿನಲ್ಲಿರುವ ಯಜುವೇಂದ್ರ ಚಹಲ್ ಕಳೆದ ಪಂದ್ಯದಲ್ಲಿ ಸಸನ್ರೈಸರ್ಸ್ ಹೈದರಾಬಾದ್ ವಿರುದ್ಧ 17 ರನ್ ನೀಡಿ ಪ್ರಮುಖ 4 ವಿಕೆಟ್ ಪಡೆದಿದ್ದರು. ಪಂದ್ಯದಲ್ಲಿ ಮಿಂಚುವ ಮೂಲಕ 170 ನೇ ವಿಕೆಟ್ ದಾಖಲಿಸಿದ ಬಲಗೈ ಸ್ಪಿನ್ನರ್, ಭಾರತದ ಹಿರಿಯ ಸ್ಪಿನ್ ಮಾಂತ್ರಿಕ ಅಮಿತ್ ಮಿಶ್ರಾ ಅವರನ್ನು ಹಿಂದಿಕ್ಕಿದ್ದರು. ಮಿಶ್ರಾ ಐಪಿಎಲ್ನಲ್ಲಿ 166 ವಿಕೆಟ್ ಪಡೆದು ವಿಕೆಟ್ ಟೇಕರ್ ಪಟ್ಟಿಯಲ್ಲಿ 3 ನೇ ಸ್ಥಾನದಲ್ಲಿದ್ದರು.
ರಾಜಸ್ಥಾನ ರಾಯಲ್ಸ್ಗೆ 5 ರನ್ ಸೋಲು: ಪಂಜಾಬ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಕೊನೆಯವರೆಗೂ ದಿಟ್ಟ ಹೋರಾಟ ನಡೆಸಿದಾಗ್ಯೂ 5 ರನ್ಗಳ ಸೋಲು ಕಂಡಿತು. ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 197 ರನ್ ದಾಖಲಿಸಿತು. 198 ರನ್ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ನಿಗದಿತ ಓವರ್‌ಗಳಲ್ಲಿ 192 ರನ್ ಮಾಡಿತು. ಇದರಿಂದ 5 ರನ್ ಅಂತರದಲ್ಲಿ ಪರಾಜಯ ಹೊಂದಿತು. ಮೊದಲ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 72 ರನ್ಗಳ ಅಧಿಕಾರಯುತ ಜಯ ದಾಖಲಿಸಿತ್ತು.