ಆಕ್ಲೆಂಡ್ (ನ್ಯೂಜಿಲೆಂಡ್): ಅಹಮದಾಬಾದ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡುತ್ತಿರುವಾಗ ಗುಜರಾತ್ ಟೈಟಾನ್ಸ್ ತಂಡದ ಕೇನ್ ವಿಲಿಯಮ್ಸನ್ ಮೊಣಕಾಲಿಗೆ ಗಾಯವಾಗಿದೆ. ಮೊದಲ ಪಂದ್ಯದಲ್ಲೇ ಗಾಯಕ್ಕೆ ತುತ್ತಾಗಿರುವ ವಿಲಿಯಮ್ಸ್ ಗಾಯದ ಗಂಭೀರತೆ ಬಗ್ಗೆ ನ್ಯೂಜಿಲೆಂಡ್ ತಂಡ ಚಿಂತಿಸುತ್ತಿದೆ. ಅವರ ಗಾಯದ ಬಗ್ಗೆ ಜಿಟಿ ಇಂದ ಯಾವುದೇ ಮಾಹಿತಿ ತಿಳಿದು ಬಂದಿಲ್ಲ.
ನಿನ್ನೆ ನಡೆದ ಪಂದ್ಯದಲ್ಲಿ ಚೆನ್ನೈ ಬ್ಯಾಟಿಂಗ್ ಮಾಡುವ ವೇಳೆ ಬೌಂಡರಿಯಲ್ಲಿ ಸಿಕ್ಸ್ ಹೋಗುತ್ತಿದ್ದ ಬಾಲ್ನ್ನು ಕ್ಯಾಚ್ ಆಗಿ ಪರಿವರ್ತಿಸಲು ಪಯತ್ನಿಸಿದ ವೇಳೆ ಅವರು ಗಾಯಗೊಂಡಿದ್ದಾರೆ. ಗಾಯದಿಂದಾಗಿ ಹೊರನಡೆದ ಕಾರಣ ಅವರ ಬದಲಾಗಿ ಸಾಯಿ ಸುದರ್ಶನ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ನೇಮಿಸಲಾಯಿತು.
ನಾಯಕ ಹಾರ್ದಿಕ್ ಪಂದ್ಯದ ನಂತರದ ಸುದ್ದಿಗೋಷ್ಠಿಯಲ್ಲಿ,"ನನಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಅವರನ್ನು ಸ್ಕ್ಯಾನ್ಗಾಗಿ ಕರೆದುಕೊಂಡು ಹೋಗಲಾಗಿದೆ. ಸ್ಕ್ಯಾನ್ ವರದಿ ಮತ್ತು ವೈದ್ಯರ ಸಲಹೆಯ ನಂತರ ಅವರಿಗೆ ಆಗಿರುವ ಗಾಯದ ಗಂಭೀರತೆ ಬಗ್ಗೆ ತಿಳಿಯಲಿದೆ. ಈಗ ನಿಖರವಾಗಿ ಯಾವುದನ್ನೂ ಹೇಳಲು ಸಾಧ್ಯವಿಲ್ಲ. ಮೊಣಕಾಲಿಗೆ ಗಾಯವಾಗಿದೆ, ಚೇತರಿಕೆಗೆ ಎಷ್ಟು ಸಮಯ ಬೇಕು ಎಂಬುದು ವೈದ್ಯರಿಂದ ತಿಳಿಯಬೇಕಿದೆ" ಎಂದು ಹೇಳಿದ್ದಾರೆ.
ನ್ಯೂಜಿಲೆಂಡ್ ಕೋಚ್ ಗ್ಯಾರಿ ಸ್ಟೆಡ್ ವಿಲಿಯಮ್ಸನ್ ಎಷ್ಟು ಸಮಯದವರೆಗೆ ಆಟದಿಂದ ಹೊರಗುಳಿಯುತ್ತಾರೆ ಮತ್ತು ಮಾಜಿ ಬ್ಲ್ಯಾಕ್ ಕ್ಯಾಪ್ಸ್ ನಾಯಕ ವಿಶ್ವಕಪ್‌ಗೆ ಫಿಟ್ ಆಗುತ್ತಾರೆಯೇ ಎಂದು ತಿಳಿಯುವುದು ತುಂಬಾ ಮುಖ್ಯವಾಗಿದೆ ಎಂದಿದ್ದಾರೆ.
ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್‌ನಲ್ಲಿ ಅನುಭವಿ ವಿಲಿಯಮ್ಸನ್ ನ್ಯೂಜಿಲೆಂಡ್‌ಗೆ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆಯಿದೆ. ಆದ್ದರಿಂದ ಅವರ ಗಾಯದ ಗಂಭೀರತೆ ಮತ್ತು ಅವರ ಅನುಪಸ್ಥಿತಿಯ ಅವಧಿಯು ತಿಳಿಯುವವರೆಗೂ ಕಿವೀಸ್ ಪಡೆ ಈ ಬಗ್ಗೆ ಹೆಚ್ಚಿನ ಗಮನಕೊಡುತ್ತಿದೆ.
ಶನಿವಾರ, ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಆರಂಭಿಕ ಪಂದ್ಯದ ಪೂರ್ವಭಾವಿ ಪತ್ರಿಕಾಗೋಷ್ಠಿಯಲ್ಲಿ, ನ್ಯೂಜಿಲೆಂಡ್ ಕೋಚ್ ಗ್ಯಾರಿ ಸ್ಟೆಡ್ ಅವರು ವಿಶ್ವಕಪ್‌ಗೆ ವಿಲಿಯಮ್ಸನ್ ಅವರ ಲಭ್ಯತೆಯ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸುವಾಗ ಈ ಬಗ್ಗೆ ಪ್ರಸ್ತಾಪಿಸಿದರು. "ನಮ್ಮ ಮೊದಲ ಆಲೋಚನೆಗಳು ನಿಸ್ಸಂಶಯವಾಗಿ ಅವರ ಆರೋಗ್ಯದ ಬಗ್ಗೆ ಇದೆ. ಗಾಯದ ತೀವ್ರತೆ ಈ ಹಂತದಲ್ಲಿ ನಮಗೆ ಖಚಿತವಾಗಿಲ್ಲ. ಮುಂದಿನ 24-48 ಗಂಟೆಗಳಲ್ಲಿ ಅವರನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಆದ್ದರಿಂದ ನಾವು ಅದರ ನಂತರ ಇನ್ನಷ್ಟು ತಿಳಿದುಕೊಳ್ಳುತ್ತೇವೆ. ಘಟನೆ ಬಗ್ಗೆ ತಿಳಿದ ನಂತರ ವಿಲಿಯಮ್ಸನ್ ಬಳಿ ಮಾತನಾಡಿದ್ದೇನೆ ಅವರು ಕ್ಷೇಮವಾಗಿದ್ದಾಗಿ ಹೇಳಿದ್ದಾರೆ" ಎಂದು ಸ್ಟೀಡ್ ಹೇಳಿದ್ದಾರೆ.
"ಈ ಹಂತದಲ್ಲಿ ನಮಗೆ ತಿಳಿದಿರುವುದು ಅವರ ಬಲ ಮೊಣಕಾಲಿಗೆ ಗಾಯವಾಗಿದೆ ಎಂದು. ನಾವು ಹೆಚ್ಚಿನ ಮಾಹಿತಿಯನ್ನು ಕಂಡುಕೊಳ್ಳುವವರೆಗೆ ನಾನು ಈಗ ನಿಮಗೆ ಅದಕ್ಕಿಂತ ಹೆಚ್ಚಿನದನ್ನು ಹೇಳಲು ಸಾಧ್ಯವಿಲ್ಲ. ವೈಟ್ ಬಾಲ್ ತಂಡದ ನಾಯಕನನ್ನು ಹೊರತುಪಡಿಸಿ ಟೀಂ ನೋಡಲು ಸಂತೋಷವಾಗುವುದಿಲ್ಲ. ಇದು ಅವರಿಗೆ ದೊಡ್ಡ ಹೊಡೆತ ಮತ್ತು ಇದು ನಮಗೆ ದೊಡ್ಡ ನಷ್ಟ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಏಕದಿನ ವಿಶ್ವಕಪ್: ತಟಸ್ಥ ಸ್ಥಳಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಸ್ಪಷ್ಟನೆ