ಅಬುದಾಭಿ: 14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ಗೆ ಸಹಿಗಿಂತಲೂ ಅತಿಹೆಚ್ಚು ಕಹಿಯಾಗಿದೆ. ಆರಂಭದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಇದಾದ ಬಳಿಕ ಆಡುವ 11ರ ಬಳಗದಿಂದಲೂ ಕೈಬಿಟ್ಟು ಬೆಂಚ್ ಕಾಯುವಂತೆ ಮಾಡಲಾಯಿತು. ಇದಕ್ಕೆಲ್ಲ ಈಗಾಗಲೇ ಪ್ರತಿಕ್ರಿಯೆ ನೀಡುವ ಮೂಲಕ ಆಕ್ರೋಶ ಹೊರಹಾಕಿರುವ ಸ್ಫೋಟಕ ಬ್ಯಾಟ್ಸ್ಮನ್ ಇದೀಗ ಮತ್ತೊಂದು ಭಾವನಾತ್ಮಕ ಪೋಸ್ಟ್ ಹಾಕಿಕೊಂಡಿದ್ದಾರೆ.
ಐಪಿಎಲ್ನಲ್ಲಿ 2014ರಿಂದಲೂ ಫ್ರಾಂಚೈಸಿ ಪರ ಆಡುತ್ತಿರುವ ಅವರು, 2016ರಲ್ಲಿ ಏಕಾಂಗಿ ಪ್ರದರ್ಶನ ತೋರಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. 2018ರಲ್ಲಿ ಬಾಲ್ ಟ್ಯಾಂಪರಿಂಗ್ ಪ್ರಕರಣದಿಂದ ಒಂದು ವರ್ಷ ನಿಷೇಧಕ್ಕೊಳಗಾಗಿ, 2019ರಲ್ಲಿ ಕಮ್ ಬ್ಯಾಕ್ ಮಾಡಿದ್ದರು. ಮತ್ತೆ 2020ರಲ್ಲಿ ತಂಡದ ನಾಯಕತ್ವಕ್ಕೆ ಮರಳಿದ್ದರು. ಆದರೆ, ಈ ಸಲ ಅವರಿಗೆ ತಂಡದಲ್ಲಿ ಹೇಳಿಕೊಳ್ಳುವಂತಹ ಅವಕಾಶ ಸಿಗಲಿಲ್ಲ.
ಅಭಿಮಾನಿಗಳಿಗೆ ವಾರ್ನರ್ ಭಾವನಾತ್ಮಕ ಪೋಸ್ಟ್
ಸನ್ರೈಸರ್ಸ್ ಹೈದರಾಬಾದ್ ತಂಡ ಇಂದು ಮುಂಬೈ ಇಂಡಿಯನ್ಸ್ ವಿರುದ್ಧ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಭಾಗಿಯಾಗಿದ್ದು, ಇದರ ಬೆನ್ನಲ್ಲೇ ವಾರ್ನರ್ ಅಭಿಮಾನಿಗಳಿಗೆ ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ತಂಡ ಬೆಂಬಲಿಸಿದ್ದಕ್ಕಾಗಿ ಧನ್ಯವಾದ. ನನಗಾಗಿ ರಚನೆ ಮಾಡಿರುವ ನೆನಪುಗಳಿಗೆ, ತೋರಿಸಿದ ಬೆಂಬಲಕ್ಕಾಗಿ ಆಭಾರಿಯಾಗಿದ್ದೇನೆ. ಇದು ಉತ್ತಮ ಪ್ರಯಾಣ. ನನ್ನ ಕುಟುಂಬ ಹಾಗೂ ನಿಮ್ಮೆಲ್ಲರನ್ನೂ ಕಳೆದುಕೊಳ್ಳಲಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಈ ಸಲದ ಆವೃತ್ತಿಯಲ್ಲಿ ವಾರ್ನರ್ ಕೇವಲ 8 ಪಂದ್ಯಗಳನ್ನಾಡಿದ್ದು, 195ರನ್ಗಳಿಕೆ ಮಾಡಿದ್ದಾರೆ. ಹೀಗಾಗಿ ಅವರನ್ನ ನಾಯಕತ್ವದಿಂದ ಕೆಳಗಿಳಿಸಿ ವಿಲಿಯಮ್ಸನ್ಗೆ ಚಾನ್ಸ್ ನೀಡಲಾಗಿತ್ತು.
ಇದನ್ನೂ ಓದಿರಿ: ನಾ ಮತ್ತೆ ಮೈದಾನದಲ್ಲಿ ಕಾಣಿಸಲ್ಲ.. SRH ಜತೆಗಿನ ಸಂಬಂಧ ಕಡಿದುಕೊಂಡ್ರಾ ವಾರ್ನರ್!?
ನಾ ಮತ್ತೆ ಮೈದಾನದಲ್ಲಿ ಕಾಣಿಸಲ್ಲ ಎಂದಿರುವ ವಾರ್ನರ್
ಆಡುವ 11ರ ಬಳಗದಿಂದ ಅವರನ್ನ ಕೈಬಿಟ್ಟಿದ್ದರಿಂದ ತಂಡದ ಸದಸ್ಯರೊಂದಿಗೆ ಕುಳಿತುಕೊಳ್ಳುವ ಬದಲು ಗ್ಯಾಲರಿಯಲ್ಲಿ ಕುಳಿತುಕೊಂಡು ತಂಡಕ್ಕೆ ಬೆಂಬಲ ನೀಡಿದ್ದ ವಾರ್ನರ್, ನಾ ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬ ಪೋಸ್ಟ್ ಸಹ ಹಾಕಿಕೊಂಡಿದ್ದರು. ಮುಂದಿನ ವರ್ಷದ ಐಪಿಎಲ್ಗಾಗಿ ಮೆಗಾ ಆಡಿಷನ್ ನಡೆಯಲಿದ್ದು, ಆಸ್ಟ್ರೇಲಿಯಾದ ಈ ಬ್ಯಾಟ್ಸ್ಮನ್ ಹೊಸ ತಂಡ ಸೇರುವ ಸಾಧ್ಯತೆ ಇದೆ.