ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ ದ್ವೀತಿಯಾರ್ಧದ ಪಂದ್ಯಗಳು ಯುಎಇನಲ್ಲಿ ನಡೆಯುತ್ತಿದ್ದು, ಟೂರ್ನಿಗೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ಮಂಡಳಿ ಇದೀಗ ಮಹತ್ವದ ನಿರ್ಧಾರ ಕೈಗೊಂಡಿದೆ.
ಲೀಗ್ ಹಂತದ ಕೊನೆಯ ಎರಡು ಪಂದ್ಯಗಳು ಅಕ್ಟೋಬರ್ 8ರಂದು ನಡೆಯಲಿದ್ದು, ಈ ದಿನದ ಎರಡು ಪಂದ್ಯಗಳು ಏಕಕಾಲದಲ್ಲಿ ನಡೆಯಲಿವೆ. ಈಗಾಗಲೇ ನಿಗದಿಗೊಂಡಿದ್ದ ವೇಳಾಪಟ್ಟಿ ಪ್ರಕಾರ ಮಧ್ಯಾಹ್ನ 3:30ಕ್ಕೆ ಅಬುಧಾಬಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ಹಾಗೂ ರಾತ್ರಿ 7:30ಕ್ಕೆ ದುಬೈನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಬೇಕಾಗಿತ್ತು. ಆದರೆ ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಎರಡು ಪಂದ್ಯಗಳು ಸಂಜೆ 7:30ಕ್ಕೆ ಆರಂಭಗೊಳ್ಳಲಿವೆ.
ಇದಕ್ಕೆ ಸಂಬಂಧಿಸಿದಂತೆ ಐಪಿಎಲ್ ಹಾಗೂ ಬಿಸಿಸಿಐ ಮಹತ್ವದ ಮಾಹಿತಿ ಹಂಚಿಕೊಂಡಿದ್ದು, ಯಾವ ಕಾರಣಕ್ಕಾಗಿ ಈ ನಿರ್ಧಾರ ಕೈಗೊಂಡಿದೆ ಎಂಬ ಮಾಹಿತಿ ಶೇರ್ ಮಾಡಿಲ್ಲ. ಇದಾದ ಬಳಿಕ ಪ್ಲೇಆಫ್ ಸುತ್ತು ಅಕ್ಟೋಬರ್ 10ರಿಂದ ಆರಂಭಗೊಳ್ಳಲಿದ್ದು, ಫೈನಲ್ ಪಂದ್ಯ ಅಕ್ಟೋಬರ್ 15ರಂದು ನಡೆಯಲಿದೆ.
ಇದನ್ನೂ ಓದಿರಿ: ರಾತ್ರೋರಾತ್ರಿ ಕೋಟ್ಯಧಿಪತಿಯಾದ ಕ್ಷೌರಿಕ.. 'ಡ್ರೀಮ್ ಇಲೆವೆನ್'ನಿಂದ ಹಣ ಗೆದ್ದು ಬೀಗಿದ..
14ನೇ ಆವೃತ್ತಿ ಐಪಿಎಲ್ ಟೂರ್ನಿ ಇದೀಗ ನಿರ್ಣಾಯಕ ಹಂತ ತಲುಪಿದ್ದು, ಯಾವುದೇ ತಂಡಗಳು ಪ್ಲೇ-ಆಫ್ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿಲ್ಲ. ದೆಹಲಿ ಕ್ಯಾಪಿಟಲ್ಸ್ ಇಂದು ಕೆಕೆಆರ್ ವಿರುದ್ಧ ಸೋತು, ಮುಂದಿನ ಪಂದ್ಯ ಗೆಲ್ಲಬೇಕಾದ ಅನಿವಾರ್ಯತೆಗೆ ಸಿಲುಕಿಕೊಂಡಿದೆ. ಇನ್ನು ಧೋನಿ ನೇತೃತ್ವದ ಸಿಎಸ್ಕೆ ಮುಂದಿನ ಪಂದ್ಯದಲ್ಲಿ ಹೈದರಾಬಾದ್ ಸೋಲಿಸಿದರೆ ಪ್ಲೇ-ಆಫ್ ಸ್ಥಾನ ಭದ್ರಪಡಿಸಿಕೊಳ್ಳಲಿದೆ.