ದುಬೈ: ಐಪಿಎಲ್ 2021ರ ಎರಡನೇ ಆವೃತ್ತಿ ಭರ್ಜರಿಯಾಗಿ ಆರಂಭಗೊಂಡಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಆರಂಭದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಸೋಲಿನ ಸುಳಿಗೆ ಸಿಲುಕಿದ್ದ ಚೆನ್ನೈ ಬಳಿಕ ಅದ್ಧೂರಿ ಪ್ರದರ್ಶನವನ್ನೇ ನೀಡಿತು. ಈ ಮೂಲಕ ಮಾಹಿ ತಂಡ 20 ರನ್ ಗೆಲುವು ಕಂಡಿದೆ.
ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, "ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ಮತ್ತು ಡ್ವೇನ್ ಬ್ರಾವೊ ಉತ್ತಮ ಪ್ರದರ್ಶನ ನೀಡಿದ್ದಾರೆ. ಅಷ್ಟೇ ಅಲ್ಲದೆ, ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಾಗಿ ಅದ್ಭುತವಾಗಿ ಆಡಿದ್ದಾರೆ" ಎಂದರು.
ರುತುರಾತ್ ಗಾಯಕ್ವಾಡ್ ಅಜೇಯ 58 ಬಾಲ್ಗೆ 88 ರನ್ ಗಳಿಸಿದ್ದರು. ಇನ್ನು ಬ್ರಾವೋ ಕೇವಲ 8 ಎಸೆತಗಳಲ್ಲಿ 23 ರನ್ ಸಿಡಿಸಿ ಭರ್ಜರಿ ಆಟವನ್ನು ಆಡಿದ್ದಾರೆ. ಸಿಎಸ್ಕೆ ಮೊದಲು ಬ್ಯಾಟಿಂಗ್ ಆಯ್ದುಕೊಂಡು 6 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತ್ತು.
"ನಾವು 140 ರನ್ ಟಾರ್ಗೆಟ್ ಇಟ್ಟಿದ್ದೆವು. ಆದರೆ, ಇವರ ಆಟದಿಂದ 160 ರನ್ಗಳ ಸಮೀಪ ತಲುಪಿದ್ದೇವೆ. ಅದು ಅದ್ಭುತ. ಅಂಬಾಟಿ ರಾಯುಡು ಗಾಯಗೊಂಡರು. ಈ ಹಿನ್ನೆಲೆಯಲ್ಲಿ ಅವರು ಹಿಂತಿರುಗುವುದು ಕಷ್ಟವಾಗಿತ್ತು. ಆದರೆ, ನಾವು ಸೂಕ್ಷ್ಮವಾಗಿ ಬ್ಯಾಟಿಂಗ್ ಮಾಡಿ, ಅದ್ಭುತವಾಗಿ ಪಂದ್ಯ ಕೊನೆಗೊಳಿಸಿದ್ದೇವೆ. ಒಬ್ಬ ಬ್ಯಾಟ್ಸಮನ್ ಕೊನೆಯವರೆಗೂ ಬ್ಯಾಟ್ ಮಾಡುವುದು ಸ್ಪೂರ್ತಿದಾಯಕ" ಎಂದು ಧೋನಿ ಗಾಯಕ್ವಾಡ್ ಮತ್ತು ಬ್ರಾವೋರನ್ನು ಹೊಗಳಿದ್ದಾರೆ.
ಬ್ಯಾಟಿಂಗ್ ಮಾಡುವಾಗ ಗಾಯಗೊಂಡ ಅಂಬಾಟಿ ರಾಯುಡು ಮುಂದಿನ ಪಂದ್ಯದ ವೇಳೆಗೆ ಚೆನ್ನಾಗಿರಬೇಕು. ಸದ್ಯ ಗಾಯಕ್ವಾಡ್ ಪಂದ್ಯಶ್ರೇಷ್ಠ ಎಂದು ಘೋಷಿಸಲ್ಪಟ್ಟಿದ್ದಾರೆ. ಇದು ಅವರ ಅತ್ಯುತ್ತಮ ಕಾರ್ಯಶೈಲಿ ಎಂದು ಇದೇ ವೇಳೆ ಬಣ್ಣಿಸಿದರು.
ಇನ್ನು ಮುಂಬೈ ಇಂಡಿಯನ್ಸ್ ತಂಡದ ಸ್ಟ್ಯಾಂಡ್-ಇನ್ ಕ್ಯಾಪ್ಟನ್ ಕೀರನ್ ಪೊಲ್ಲಾರ್ಡ್ ಸಹ ಗಾಯಕ್ವಾಡ್ ಅಬ್ಬರದ ಆಟಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.