ನವದೆಹಲಿ : ಯುಎಇಯಲ್ಲಿ ನಡೆಯಲಿರುವ 2ನೇ ಹಂತದ ಐಪಿಎಲ್ನಲ್ಲಿ ಶ್ರೇಯಸ್ ಅಯ್ಯರ್ ತಂಡಕ್ಕೆ ಕಮ್ಬ್ಯಾಕ್ ಮಾಡಿದ ಹೊರತಾಗಿಯೂ ಡೈನಾಮಿಕ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಮುಂದುವರಿಯುವ ಸಾಧ್ಯತೆಯಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಕಳೆದ 2 ವರ್ಷಗಳಿಂದ ಡೆಲ್ಲಿ ತಂಡದ ಖಾಯಂ ನಾಯಕನಾಗಿದ್ದ ಶ್ರೇಯಸ್ ಅಯ್ಯರ್ ಕಳೆದ ಮಾರ್ಚ್ನಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ವೇಳೆ ಭುಜದ ನೋವಿಗೆ ಒಳಗಾಗಿ ಇಂಗ್ಲೆಂಡ್ ವಿರುದ್ಧ ಸೀಮಿತ ಓವರ್ಗಳ ಸರಣಿಯ ಜೊತೆಗೆ ಮೊದಲಾರ್ಧದ ಐಪಿಎಲ್ನಿಂದಲೂ ಹೊರಬಿದ್ದಿದ್ದರು. ಇದೀಗ ಗಾಯದಿಂದ ಚೇತರಿಸಿಕೊಂಡಿದ್ದು, ಯುಎಇನಲ್ಲಿ ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ತರಬೇತಿ ಆರಂಭಿಸಿದ್ದಾರೆ.
ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಾಯಕತ್ವವನ್ನು ಶ್ರೇಯಸ್ಗೆ ನೀಡಲಿದೆಯೇ ಅಥವಾ 14ನೇ ಆವೃತ್ತಿಯಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಅಗ್ರಸ್ಥಾನದಲ್ಲಿರಿಸಿರುವ ರಿಷಭ್ ಪಂತ್ಗೆ ನೀಡಲಿದೆಯಾ ಎಂದು ಕ್ರಿಕೆಟ್ ತಜ್ಞರು ಮತ್ತು ಅಭಿಮಾನಿಗಳ ಮನದಲ್ಲಿ ಕುತೂಹಲವನ್ನುಂಟು ಮಾಡುತ್ತಿದೆ.
ಶ್ರೇಯಸ್ ಅಯ್ಯರ್ ಫಿಟ್ ಆಗಿರುವುದು ಮತ್ತು ಕಮ್ಬ್ಯಾಕ್ಗೆ ಸಿದ್ಧಗೊಂಡಿರುವುದು ಡೆಲ್ಲಿ ತಂಡಕ್ಕೆ ಸಂತೋಷದ ವಿಷಯವಾಗಿದೆ. ಆದರೆ ಡಿಸಿ ಮ್ಯಾನೇಜ್ಮೆಂಟ್ ಅಯ್ಯರ್ಗೆ ಸಂಪೂರ್ಣ ಚೇತರಿಸಿಕೊಳ್ಳಲು ಮತ್ತಷ್ಟು ಸಮಯವನ್ನು ನೀಡಬೇಕೆಂಬ ಆಶಯದಲ್ಲಿದೆ. ಆದ್ದರಿಂದ ರಿಷಭ್ ಪಂತ್ ಯುಎಇನಲ್ಲಿಯೂ ನಾಯಕನಾಗಿ ಮುಂದುವರಿಯಲಿದ್ದಾರೆ ಎನ್ನಲಾಗ್ತಿದೆ. ಆದರೆ ಪಂತ್ ಈ ಬಾರಿಯ ಐಪಿಎಲ್ನಲ್ಲಿ ಮಾತ್ರ ಡೆಲ್ಲಿ ತಂಡವನ್ನು ರಿಷಭ್ ಪಂತ್ ಮುನ್ನಡೆಸಲಿದ್ದಾರೆ ಎಂದು ಮೂಲವೊಂದರಿಂದ ಮಾಹಿತಿ ಸಿಕ್ಕಿದೆ.
ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ಡೆಲ್ಲಿ ತಂಡ ಪಂತ್ ನಾಯಕತ್ವದಲ್ಲಿ ಆಡಿರುವ 8 ಪಂದ್ಯಗಳಲ್ಲಿ 6 ಗೆಲುವು ಮತ್ತು 2 ಸೋಲಿನೊಂದಿಗೆ ಅಗ್ರಸ್ಥಾನದಲ್ಲಿದೆ.
ಇದನ್ನು ಓದಿ:Iplಗೂ ಮುನ್ನವೇ ಆರ್ಸಿಬಿಗೆ ಆಘಾತ: ಗಾಯಗೊಂಡು ಹೊರಬಿದ್ದ ಸ್ಟಾರ್ ಆಲ್ರೌಂಡರ್