ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನೋದು ಭಾರತದಲ್ಲಿ ಮಹಾ ಮನರಂಜನೆ. ಈ ಮನರಂಜನೆಯನ್ನು ಎಲ್ಲರ ಕೈಗೆಟಕುವಂತೆ ಜಿಯೋ ಸಂಸ್ಥೆ ಪುಕ್ಕಟೆಯಾಗಿ ನೀಡುತ್ತಿದೆ. ಇದೇ ವೇಳೆ ಸಂಸ್ಥೆ ಕೋಟಿ ಕೋಟಿ ಲಾಭ ಗಳಿಸುತ್ತಿದೆ. ಉಚಿತವಾಗಿ ಕ್ರಿಕೆಟ್ ಮ್ಯಾಚ್ ವೀಕ್ಷಣೆಯ ಅನುಕೂಲ ಒದಗಿಸಿ ಕೋಟ್ಯಂತರ ಸಂಪಾದನೆ ಗಳಿಸುತ್ತಿರುವುದು ಹೇಗೆನ್ನುವಿರಾ?. ಹೌದು, ಜಿಯೋ ಡಿಜಿಟಲ್ ವೇದಿಕೆಗೆ ಐಪಿಎಲ್ ಸಮಯದಲ್ಲಿ ಜಾಹೀರಾತು ನೀಡಲು ಕಂಪನಿಗಳು ಮುಗಿಬಿದ್ದಿವೆ.
ಮೊದಲ ವಾರದಲ್ಲಿ ಜಾಹೀರಾತು ನೀಡಲು 23 ಸಂಸ್ಥೆಗಳು ಮುಂದೆ ಬಂದಿವೆ. ಇದು ಭಾರತದ ಡಿಜಿಟಲ್ ಸ್ಟ್ರೀಮಿಂಗ್‌ನಲ್ಲಿರುವ ಎಲ್ಲಾ ಕಾರ್ಯಕ್ರಮಗಳಿಗಿಂತಲೂ ಹೆಚ್ಚು ಪ್ರಾಯೋಜಕರಿರುವ ಪ್ರಸಾರ ಎಂದು ಜಿಯೋಸಿನಿಮಾ ತಿಳಿಸಿದೆ. ಡ್ರೀಮ್ 11 ಸಹ-ಪ್ರಸ್ತುತಿ ಪ್ರಾಯೋಜಕರಾಗಿದ್ದರೆ, ಜಿಯೋ ಮಾರ್ಟ್, ಫೋನ್ಪೇ ಮತ್ತು ಟಿಯಾಗೂ ಇವಿ ಕೋ ಪವರ್ಡ್ ಪ್ರಾಯೋಜಕರು. ಅಪ್ಪಿ ಫಿಝಿ, ಇಟಿ ಮನಿ, ಕ್ಯಾಸ್ಟ್ರಾಲ್, ಟಿವಿಎಸ್, ಬಿಂಗೋ, ಸ್ಟಿಂಗ್, ಅಜಿಯೋ, ರುಪೆ, ಲೂಯಿಸ್-ಫಿಲಿಪ್ ಜೀನ್ಸ್, ಅಮೆಝಾನ್, ರ್‍ಯಾಪಿಡೋ, ಅಲ್ಟ್ರಾ ಟೆಕ್ ಸಿಮೆಂಟ್, ಪುಮಾ, ಕಮಲ್ ಪಸಂದ್, ಕಿಂಗ್ ಫಿಶರ್ ಪವರ್ ಸೋಡಾ, ಜಿಂದಾಲ್ ಪ್ಯಾಂಥರ್ ಟಿಎಂಟಿ ರೆಬಾರ್ ಮತ್ತು ಇಂಡೀಡ್ಗಳು ಸಹ ಪ್ರಾಯೋಜಕ್ವ ನೀಡಿವೆ.
"ಜಿಯೋಸಿನಿಮಾದಲ್ಲಿ ಸೈನ್ ಅಪ್ ಮಾಡಿದ ಜಾಹೀರಾತುದಾರರ ಸಂಖ್ಯೆ ಹೊಸ ದಾಖಲೆಯಾಗಿದೆ. ಡಿಜಿಟಲ್‌ನಲ್ಲಿ ಕಳೆದ ವರ್ಷಕ್ಕಿಂತ ಗಮನಾರ್ಹವಾಗಿ ಇದು ಹೆಚ್ಚಾಗಿದೆ. ಭೋಜ್‌ಪುರಿ, ಪಂಜಾಬಿ, ಮರಾಠಿ ಮತ್ತು ಗುಜರಾತಿ ಭಾಷಾ ವೀಕ್ಷಕರ ಸಂಖ್ಯೆ ಹೆಚ್ಚಿದೆ. ಸ್ಥಳೀಯ ಭಾಷೆಯ ಪ್ರಸಾರವನ್ನು ಜನ ಇಷ್ಟಪಡುತ್ತಿದ್ದಾರೆ" ಎಂದು ವಯಾಕಾಂ18 ಸ್ಪೋರ್ಟ್ಸ್ನ ಸಿಇಒ ಅನಿಲ್ ಜಯರಾಜ್ ಹೇಳಿದ್ದಾರೆ.
ಮಲ್ಟಿ-ಕ್ಯಾಮ್, 4K, ಹೈಪ್ ಮೋಡ್‌ನಂತಹ ವೈಶಿಷ್ಟ್ಯಗಳು ಪ್ರಕ್ಷಕರಿಗೆ ಹೆಚ್ಚು ಇಷ್ಟವಾಗುತ್ತಿವೆ. ಇನ್ನಷ್ಟು ಹೊಸ ಫೀಚರ್ಗಳು ತಂತ್ರಾಂಶಕ್ಕೆ ಮುಂದಿನ ದಿನಗಳಲ್ಲಿ ಬರಲಿದ್ದು ಪ್ರೇಕ್ಷಕರಿಗೆ ಹೆಚ್ಚಿನ ಮನರಂಜನೆ ನೀಡಲು ಇಚ್ಚಿಸುತ್ತೇವೆ. ಪ್ರತಿ ಪಂದ್ಯದಲ್ಲಿ 57 ನಿಮಿಷ ಸರಾಸರಿ ವೀಕ್ಷಕರನ್ನು ಜಿಯೋ ಸಿನಿಮಾ ದಾಖಲಿಸುತ್ತಿದೆ. ಇದು ಕಳೆದ ಆವೃತ್ತಿಯ ಐಪಿಎಲ್ಕ್ಕಿಂತ ಶೇ 60 ದಷ್ಟು ಹೆಚ್ಚು ಎಂದಿದ್ದಾರೆ.
ಡಿಜಿಟಲ್ ಮಾಧ್ಯಮದಲ್ಲಿ ಜಾಹೀರಾತು ಹೆಚ್ಚು ಪರಿಣಾಮಕಾರಿಯಾಗಿದ್ದು, ಇದಕ್ಕಾಗಿ ಪ್ರಯೋಜಕರು ದುಂಬಾಲು ಬಿದ್ದಿದ್ದಾರೆ. ಈ ವೇದಿಕೆಯಲ್ಲಿನ ಹೂಡಿಕೆ ಸಂಸ್ಥೆಗಳಿಗೆ ಹೆಚ್ಚು ಪರಿಣಾಮಕಾರಿ ಫಲಿತಾಂಶ ನೀಡಿದೆ ಎಂದು ಜಯರಾಜ್ ಹೇಳಿದ್ದಾರೆ.
ಮೊದಲ ದಿನ ದಾಖಲೆ: ಐಪಿಎಲ್ 16ನೇ ಆವೃತ್ತಿಯ ಉದ್ಘಾಟನಾ ಪಂದ್ಯದಂದು ಅತೀ ಹೆಚ್ಚು ವೀಕ್ಷಣೆ ಗಳಿಸಿ ಜಿಯೋಸಿನಿಮಾ ದಾಖಲೆ ಬರೆದಿತ್ತು. ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ವೇಳೆ 1.6 ಕೋಟಿ ವೀಕ್ಷಣೆ ಪಡೆದುಕೊಂಡಿತ್ತು. 2.5 ಕೋಟಿ ಜನ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡಿದ್ದರು.
ಇದನ್ನೂ ಓದಿ: IPL 2023 RCB vs ಲಕ್ನೋ : ಟಾಸ್ ಸೋತ ಬೆಂಗಳೂರು ಬ್ಯಾಟಿಂಗ್