ಬೆಂಗಳೂರು : ಮಹೇಂದ್ರ ಸಿಂಗ್ ಧೋನಿ ಭಾರತದ ಮೂರು ತಲೆಮಾರಿನ ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚುಮೆಚ್ಚು. ಕ್ರಿಕೆಟ್ ಬಗ್ಗೆ ಫ್ಯಾಷನ್ ಇಲ್ಲದಿದ್ದರೂ ಧೋನಿ ಎಂಬ ಹೆಸರು ಕೇಳದವರ ಸಂಖ್ಯೆ ಕಡಿಮೆಯೇ ಎಂದು ಹೇಳಬೇಕು. ಇದಕ್ಕೆ ಕಾರಣ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ನ ವೃತ್ತಿ ಜೀವನದ ನಾಯಕತ್ವ ನಿಭಾಯಿಸಿದ ರೀತಿ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ ನಾಲ್ಕು ವರ್ಷಗಳು ಆಗುತ್ತಾ ಬಂದರೂ ಅಭಿಮಾನಿಗಳ ಸಂಖ್ಯೆ ಏರುತ್ತಲೇ ಇದೆ. ಇದಕ್ಕೆ ಅವರು ಬ್ಯಾಟಿಂಗ್ ಬಂದಾಗ ಡಿಜಿಟಲ್ ಮಾಧ್ಯಮದಲ್ಲಿ ವೀಕ್ಷಕರ ಸಂಖ್ಯೆ ಹೆಚ್ಚಾಗುವುದೇ ಸಾಕ್ಷಿ.
ಇದಲ್ಲದೇ ದಿಗ್ಗಜ ಆಟಗಾರು ಸಹ ಧೋನಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಾಯಕ ಫಾಫ್ ಡು ಪ್ಲೆಸಿಸ್ ಬಳಿ ಐಪಿಎಲ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಯಾರು ಎಂದು ಪ್ರಶ್ನೆ ಕೇಳಿದ್ದಕ್ಕೆ ನೇರವಾಗಿ ಮಹೇಂದ್ರ ಸಿಂಗ್ ಧೋನಿ ಎಂಬ ಹೆಸರನ್ನು ತೆಗೆದುಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಾಯಕ ಎಂಎಸ್ ಧೋನಿ ಐಪಿಎಲ್ ಇತಿಹಾಸದಲ್ಲಿ ಹೆಚ್ಚು ಕೀರ್ತಿ ಗಳಿಸಿದ ಆಟಗಾರರಲ್ಲಿ ಒಬ್ಬರಾಗುತ್ತಾರೆ. ಅವರ ದಾಖಲೆಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಲಿವೆ ಎಂದು ಹೇಳಿದ್ದಾರೆ.
ಆರ್‌ಸಿಬಿ ಪಂದ್ಯ ನಡೆಯುತ್ತಿರುವ ವೇಳೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಫಾಫ್ ಡು ಪ್ಲೆಸಿಸ್ಗೆ, ಯಾರು ಆಡಬೇಕು ಎಂದು ಬಯಸುತ್ತೀರಿ ಎಂದು ಕೇಳಿದ್ದಕ್ಕೆ ಅವರು ಬ್ರಿಯಾನ್ ಲಾರಾ ಐಪಿಎಲ್‌ನಲ್ಲಿ ಆಡಬೇಕಿತ್ತು ಎಂದು ಅಭಿಪ್ರಾಯ ಹೊರಹಾಕಿದ್ದಾರೆ. ಲಾರಾ ಅವರು ಅವರ ಕ್ರಿಕೆಟ್ ಜೀವನದಲ್ಲಿ ಕೇವಲ ಮೂರು ಟಿ 20 ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ ಅವರು 99 ರನ್ ಗಳಿಸಿದ್ದು, ಒಂದು ಅರ್ಧಶತಕ ಒಳಗೊಂಡಿದೆ.
ಫಾಫ್ ಬಳಿ ಅವರ ನೆಚ್ಚಿನ ಐಪಿಎಲ್ ಇನ್ನಿಂಗ್ ಯಾವುದು ಎಂದು ಕೇಳಿದ್ದಕ್ಕೆ ಅವರು, 2021ರ ಐಪಿಎಲ್ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪರ ಆಡಿದ್ದು ನನ್ನ ನೆಚ್ಚಿನ ಐಪಿಎಲ್ ಇನ್ನಿಂಗ್ಸ್ ಎಂದಿದ್ದಾರೆ. ಅವರು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ 59 ಎಸೆತಗಳಲ್ಲಿ 86 ರನ್ ಗಳಿಸಿದ್ದರು. ಅವರ ಈ ರನ್ ತಂಡ ಟ್ರೋಫಿ ಗೆಲ್ಲುವಲ್ಲಿ ಮಹತ್ವದ ಪಾತ್ರವಹಿಸಿತ್ತು.
ಪ್ಯಾಷನ್ ಎಂಬುದು ಅತ್ಯಂತ ಪ್ರಸಿದ್ಧ ಕ್ರಿಕೆಟ್ ಲೀಗ್‌ನ ಕ್ರೇಜ್ ಮತ್ತು ಉತ್ಸಾಹವನ್ನು ವಿವರಿಸುವ ಪದವಾಗಿದೆ. ವಿಶ್ವ ಕ್ರಿಕೆಟ್ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಅತ್ಯಂತ ಹೆಸರುವಾಸಿಯಾದ ಟೂರ್ನಿ ಎಂದು ಡು ಪ್ಲೆಸಿಸ್ ಹೇಳಿದ್ದಾರೆ. ಅದರ ಜೊತೆಗೆ ಟಿ20 ಮಾದರಿಯ ಕ್ರಿಕೆಟ್ನ್ನು ಫನ್ ಎಂದು ಕರೆದಿದ್ದಾರೆ.
ಆರ್‌ಸಿಬಿ ನಾಯಕನಾಗಿ ಫಾಫ್ 23 ಪಂದ್ಯಗಳಲ್ಲಿ 82 ಬೌಂಡರಿ ಮತ್ತು 38 ಸಿಕ್ಸರ್‌ಗಳನ್ನು ಒಳಗೊಂಡ 8 ಅರ್ಧಶತಕದ ಜೊತೆಗೆ 873 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಅವರು 123 ಪಂದ್ಯಗಳಲ್ಲಿ 36.27 ಸರಾಸರಿಯೊಂದಿಗೆ 3,808 ರನ್ ಗಳಿಸಿದ್ದಾರೆ. ಅವರು ಐಪಿಎಲ್‌ನಲ್ಲಿ 347 ಬೌಂಡರಿಗಳು ಮತ್ತು 134 ಸಿಕ್ಸರ್‌ಗಳೊಂದಿಗೆ 30 ಅರ್ಧ ಶತಕಗಳನ್ನು ಹೊಂದಿದ್ದಾರೆ.
ಇದನ್ನೂ ಓದಿ: ಆರ್‌ಸಿಬಿ ಪರ ಸಾವಿರ ರನ್ ಪೂರೈಸಿದ ಮ್ಯಾಕ್ಸ್ವೆಲ್