ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ರಾಜಸ್ಥಾನ ತಂಡ ಕೊನೆಯ ಹಂತದಲ್ಲಿ ಮೋರಿಸ್ ಅಬ್ಬರದಿಂದ ರೋಚಕ ಗೆಲುವು ಸಾಧಿಸಿತು. ಮೊದಲ ಪಂದ್ಯದಲ್ಲಿ ಸೋಲು ಕಂಡ ರಾಯಲ್ಸ್ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಲಯಕ್ಕೆ ಮರಳಿದೆ.
ಈ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲೂ ಭರ್ಜರಿ ಪ್ರದರ್ಶನ ನೀಡಿದ ಆಲ್ ರೌಂಡರ್ ಕ್ರಿಸ್ ಮೋರಿಸ್, ಸೋಲಿನ ದವಡೆಯಲ್ಲಿದ್ದ ರಾಜಸ್ಥಾನ ತಂಡಕ್ಕೆ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ವಿಜಯ ತಂದುಕೊಟ್ಟರು.
ಇದೇ ವೇಳೆ, 45 ರನ್ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಆಸರೆಯಾಗಿದ್ದು ಡೇವಿಡ್ ಮಿಲ್ಲರ್. ಮೊದಲ ಪಂದ್ಯದಲ್ಲಿ ಬೆಂಚ್ ಕಾದಿದ್ದ ಅವರು, ಈ ಪಂದ್ಯದಲ್ಲಿ ಅವಕಾಶ ಪಡೆದು ತಮ್ಮ ಸಾಮರ್ಥ್ಯ ತೋರಿಸಿದರು. ಅತ್ಯುತ್ತಮ ಇನ್ನಿಂಗ್ಸ್ ಕಟ್ಟಿದ ಮಿಲ್ಲರ್ ಆಕರ್ಷಕ ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
ಪಂದ್ಯದ ಬಳಿಕ ಮಾತನಾಡಿದ ಕ್ಯಾಪ್ಟನ್ ಸಂಜು ಸ್ಯಾಮ್ಸನ್, ಈ ಪಂದ್ಯವನ್ನು ನಾವು ಗೆಲ್ಲುತ್ತೇವೆ ಅನ್ನೋದನ್ನು ಊಹಿಸಿರಲಿಲ್ಲ. ಕೇವಲ 42 ರನ್ಗಳಿಗೆ ನಾವು 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದೆವು. ಆಗ ನಾವು ಈ ಪಂದ್ಯವನ್ನು ಕಳೆದುಕೊಂಡೆವು ಅಂದುಕೊಂಡಿದ್ದೆ. ಆದರೆ ಮಿಲ್ಲರ್ ಮತ್ತು ಮೋರಿಸ್ ಪಂದ್ಯದ ಗತಿ ಬದಲಿಸಿ ಜಯ ತಂದು ಕೊಟ್ಟರು ಎಂದು ಸಂತಸ ವ್ಯಕ್ತಪಡಿಸಿದರು.