ದುಬೈ: ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್-2021 ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸುಲಭ ಗೆಲುವು ಸಾಧಿಸಿರುವುದಕ್ಕೆ ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಪಂತ್, 2021 ರ ಐಪಿಎಲ್ನಲ್ಲಿ ನಾವೀಗ ಅಗ್ರಸ್ಥಾನದಲ್ಲಿದ್ದೇವೆ. ನಮ್ಮ ತಂಡವು ವಿಶ್ವದ ಅತ್ಯಂತ ವೇಗದ ಬೌಲರ್ಗಳನ್ನು ಹೊಂದಿದ್ದು, ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಈ ತಂಡದ ನಾಯಕನಾಗಿರುವುದಕ್ಕೆ ನನಗೆ ಹೆಮ್ಮೆಯಿದೆ ಎಂದು ಹೇಳಿದ್ದಾರೆ.
ನಿನ್ನೆ ನಡೆದ ಸನ್ರೈಸರ್ಸ್ ಹಾಗೂ ದೆಹಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು ರಿಷಭ್ ಟೀಂ 8 ವಿಕೆಟ್ಗಳ ಅಂತರದಿಂದ ಮಣಿಸಿತು. ಹೈದರಾಬಾದ್ ತಂಡ 20 ಓವರ್ಗಳಲ್ಲಿ 9 ವಿಕೆಟ್ ಪತನಕ್ಕೆ 134 ರನ್ಗಳನ್ನು ಕಲೆ ಹಾಕಿತ್ತು. ಈ ಮೊತ್ತವನ್ನ ಬೆನ್ನಟ್ಟಿದ ದೆಹಲಿ ತಂಡ 2 ಓವರ್ಗಳು ಬಾಕಿ ಇರುವಾಗಲೇ, 135 ರನ್ ಗಳಿಸಿ ಜಯ ಗಳಿಸಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದೆ.
ಇದನ್ನೂ ಓದಿ: IPL 2021: ಸನ್ ರೈಸರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ಗೆ ಸುಲಭ ಗೆಲುವು
ಎರಡು ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಎಂದು ಘೋಷಿಸಲ್ಪಟ್ಟ ದೆಹಲಿ ವೇಗಿ ಆನ್ರಿಚ್ ನಾರ್ಟ್ಜೆ ಮಾತನಾಡಿ, ನಮಗೆ ಈ ಪಂದ್ಯ ಗೆದ್ದಿರುವುದು ಖುಷಿಯಾಗಿದೆ. ನಾವು ಹೆಚ್ಚು ಮಾತನಾಡಬೇಕಾಗಿಲ್ಲ. ಕೂಲಾಗಿ ಆಟವಾಡಿದರೆ ಸಾಕು ಎಂದಿದ್ದಾರೆ.