ಲಖನೌ (ಉತ್ತರ ಪ್ರದೇಶ): ಲಖನೌ ಸೂಪರ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 18 ರನ್ಗಳಿಂದ ರೋಚಕ ಗೆಲುವು ಸಾಧಿಸಿದೆ. ನಿಧಾನಗತಿ ಪಿಚ್ನಲ್ಲಿ ರನ್ಗಳು ಕಲೆ ಹಾಕಲು ಎರಡೂ ತಂಡಗಳು ಪರದಾಡಿದವು. ಆದರೆ, ಅಲ್ಪ ಮೊತ್ತದ ಗುರಿ ನೀಡಿದ್ದರೂ, ಬಿಗಿ ಬೌಲಿಂಗ್ನಿಂದ ಆರ್ಸಿಬಿ ಜಯದ ಕೇಕೆ ಹಾಕಿತು.
ಇಲ್ಲಿನ ಏಕನಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 126 ರನ್ ಮಾತ್ರ ಪೇರಿಸಿತ್ತು. 127 ರನ್ ಗುರಿ ಬೆನ್ನಟ್ಟಿದ ಕೆಎಲ್ ರಾಹುಲ್ ಪಡೆ ಇನ್ನೂ ಒಂದು ಬಾಲ್ ಬಾಕಿರುವಾಗಲೇ 108 ರನ್ ಕಲೆ ಹಾಕಿತು. ಈ ಮೂಲಕ ಫಾಫ್ ಡು ಪ್ಲೆಸಿಸ್ ಪಡೆ ಎದುರು ಲಖನೌ ಶರಣಾಯಿತು.
ಲಖನೌ ಆರಂಭದಿಂದಲೂ ವಿಕೆಟ್ಗಳನ್ನು ಕಳೆದುಕೊಳ್ಳುತ್ತಾ ಆಘಾತ ಅನುಭವಿಸಿತು. ನಾಯಕ ರಾಹುಲ್ ಗಾಯದ ಕಾರಣದಿಂದ ಹೊರಗುಳಿದ ಕಾರಣ ಕೈಲ್ ಮೇಯರ್ಸ್ ಮತ್ತು ಆಯುಶ್ ಬದೋನಿ ಕ್ರೀಸ್ ಬಂದರು. ಆದರೆ, ಮೇಯರ್ಸ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಕೃನಾಲ್ ಪಾಂಡ್ಯ (14) ಮತ್ತು ಆಯುಶ್ ಬದೋನಿ (4), ದೀಪಕ್ ಹೂಡಾ (1) ಹಾಗೂ ನಿಕೋಲಸ್ ಪೂರನ್ (9) ಸಹ ಬೇಗನೇ ಪೆವಿಲಿಯನ್ ಸೇರಿದರು. ಇದರಿಂದ ಲಖನೌ ತಂಡ 38 ರನ್ಗಳು ಆಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು.
ನಂತರ ಮಾರ್ಕಸ್ ಸ್ಟೊಯಿನಿಸ್ (13), ಕೃಷ್ಣಪ್ಪ ಗೌತಮ್ (23) ಮತ್ತು ರವಿ ಬಿಷ್ಣೋಯ್ (5) ಕೂಡ ಹೆಚ್ಚಿನ ರನ್ ಸಿಡಿಸಲು ಸಾಧ್ಯವಾಗಲಿಲ್ಲ. ಕೊನೆಯಲ್ಲಿ ನವೀನ್-ಉಲ್-ಹಕ್ (13), ಅಮಿತ್ ಮಿಶ್ರಾ (19) ರನ್ ಕಲೆ ಹಾಕಿದರು. ಆದರೆ, ಹೀಗಾಗಿ ಅಲ್ಪ ರನ್ ಗುರಿ ಮುಟ್ಟಲು ಸಾಧ್ಯವಾಗದೇ ಲಖನೌ ಸೋಲೊಪ್ಪಿಕೊಳ್ಳಬೇಕಾಯಿತು. ಆರ್ಸಿಬಿ ಪರ ಜೋಶ್ ಹ್ಯಾಜಲ್‌ವುಡ್, ಕರ್ಣ್ ಶರ್ಮಾ ತಲಾ 2 ವಿಕೆಟ್ ಪಡೆದರೆ, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಆರ್ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಮತ್ತು ಡು ಪ್ಲೆಸಿಸ್ ನಿಧಾನ ಗತಿಯ ಆರಂಭ ನೀಡಿದರು. ಈ ಜೋಡಿ 50ರನ್ ಜೊತೆಯಾಟ ಮಾಡಿತಾದರೂ ಬಿರುಸಿನ ರನ್ ಬರದ ಕಾರಣ ಪವರ್ ಪ್ಲೇ ಅಂತ್ಯಕ್ಕೆ ವಿಕೆಟ್ ನಷ್ಟ ವಿಲ್ಲದೇ 42 ರನ್ ಗಳಿಸಿತ್ತು. ರವಿ ಬಿಷ್ಣೋಯ್ ಎಸೆತದಲ್ಲಿ ಕ್ರೀಸ್ ಬಿಟ್ಟು ಬಂದು ದೊಡ್ಡ ಹೊಡೆತಕ್ಕೆ ಕೈ ಹಾಕಿದ ವಿರಾಟ್ 30 ಎಸೆತದಲ್ಲಿ 31 ರನ್ ಗಳಿಸಿ ಸ್ಟಂಪ್ ಔಟಾದರು.
ಶಹಬಾಜ್ ಬದಲಾಗಿ ತಂಡಕ್ಕೆ ಸೇರಿದ್ದ ಅನುಜ್ ರಾವತ್ 9 ರನ್ಗಳಿಸಿ ನಿರ್ಗಮಿಸಿದರು. ಭರವಸೆಯ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ 4 ರನ್ಗೆ ವಿಕೆಟ್ ಕೊಟ್ಟರು. ನಂತರ ಬಂದ ಸುಯಶ್ ಪ್ರಭುದೇಸಾಯಿ 6 ರನ್ಗೆ ಪೆವಿಲಿಯನ್ ಸೇರಿದರು. 15.2 ಓವರ್ ಆಗಿದ್ದಾಗ ಕೊಂಚ ಹೊತ್ತು ಮಳೆ ಬಂದ ಹಿನ್ನೆಲೆ ಪಂದ್ಯವನ್ನು ನಿಲ್ಲಿಸಲಾಗಿತ್ತು. ಮಳೆಗೂ ಮುನ್ನ ಕ್ರೀಸ್ನಲ್ಲಿ 36 ಬಾಲ್ನಲ್ಲಿ 40 ರನ್ ಗಳಿಸಿದ್ದ ಫಾಫ್ ಮತ್ತು ದಿನೇಶ್ ಕಾರ್ತಿಕ್ ಕ್ರೀಸ್ನಲ್ಲಿದ್ದರು.
ಆದರೆ, ಮಳೆಯ ಬಿಡುವಿನ ನಂತರ ಡು ಪ್ಲೆಸಿಸ್ (44) ಔಟಾದರು. ಕಾರ್ತಿಕ್ (16) ಹೋರಾಟಕ್ಕೆ ಪ್ರಯತ್ನಿಸಿದರಾದರೂ ದೊಡ್ಡ ಹೊಡೆತಗಳು ಬರಲಿಲ್ಲ. ಮಹಿಪಾಲ್ (3), ಕರ್ಣ್ ಶರ್ಮಾ (2), ಮೊಹಮ್ಮದ್ ಸಿರಾಜ್ (0) ಬೇಗ ವಿಕೆಟ್ ಕೊಟ್ಟರು. ಹಸರಂಗ (8) ಮತ್ತು ಜೋಶ್ ಹ್ಯಾಜಲ್‌ವುಡ್ (1) ಅಜೇಯರಾಗಿ ಉಳಿದು ಆಲ್ ಔಟ್ ತಪ್ಪಿಸಿದರು. ಲಖನೌ ಪರ ನವೀನ್-ಉಲ್-ಹಕ್ 3 ವಿಕೆಟ್, ರವಿ ಬಿಷ್ಣೋಯ್ ಮತ್ತು ಅಮಿತ್ ಮಿಶ್ರಾತಲಾ 2, ಕೃಷ್ಣಪ್ಪ ಗೌತಮ್ ಒಂದು ವಿಕೆಟ್ ಪಡೆದರು. ಈ ಗೆಲುವಿನ ಮೂಲಕ 10 ಅಂಕಗಳೊಂದಿಗೆ ಆರ್ಸಿಬಿ 5ನೇ ಸ್ಥಾನಕ್ಕೇರಿದೆ.
ಇದನ್ನೂ ಓದಿ: IPLನಲ್ಲಿಂದು ಲಕ್ನೋ ವಿರುದ್ಧ 'ಗಂಭೀರ' ಸೇಡಿಗೆ ಸಜ್ಜಾದ RCB; ಪಂದ್ಯಕ್ಕೆ ಮಳೆ ಆತಂಕ