ಕೋಲ್ಕತ್ತಾ, ಪಶ್ಚಿಮ ಬಂಗಾಳ: ಭಾರತದ ಮಿಲಿಯನ್ ಡಾಲರ್ ಕ್ರಿಕೆಟ್ ಲೀಗ್ ಎಂದೇ ಖ್ಯಾತವಾಗಿರುವ ಐಪಿಎಲ್ಗೆ ಈ ವರ್ಷ ಗಾಯದ ಬರೆ ಬಿದ್ದಿದೆ. ವಿಲಿಯನ್‌ಗಟ್ಟಲೆ ಹಣ ಕೊಟ್ಟು ಖರೀದಿಸಿದ ಆಟಗಾರರೇ ತಂಡದಿಂದ ಹೊರಗುಳಿದಿರುವುದು ಪ್ರಾಂಚೈಸಿಗಳಿಗೂ ದೊಡ್ಡ ಹೊರೆಯೇ ಆಗಿದೆ. ಈಗ ಗಾಯದ ಸಮಸ್ಯೆಯಿಂದ 2023ರ ಐಪಿಎಲ್ನಲ್ಲಿ ರಿಸೆ ಟೋಪ್ಲೆ ತಂಡದಿಂದ ಹೊರಗುಳಿದಿದ್ದಾರೆ. ಏಪ್ರಿಲ್ 2 ರಂದು ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಫಿಲ್ಡಿಂಗ್ ಮಾಡುತ್ತಿದ್ದಾಗ ಟೋಪ್ಲೆ ಅವರ ಬಲ ಭುಜಕ್ಕೆ ಗಾಯವಾಗಿದ್ದು, ಈಗ ಅವರು ಗಾಯದ ಸಮಸ್ಯೆದಿಂದ ತಂಡದಿಂದ ಹೊರಗುಳಿದಿದ್ದಾರೆ.
ತನ್ನ ಚೊಚ್ಚಲ ಪಂದ್ಯದಲ್ಲಿ ಟೋಪ್ಲಿ ಎರಡು ಓವರ್ಗಳನ್ನು ಎಸೆದು 14 ರನ್ಗಳು ನೀಡಿ ಕ್ಯಾಮರೂನ್ ಗ್ರೀನ್ ಅವರ ವಿಕೆಟ್ ಅನ್ನು ಪಡೆದಿದ್ದರು. ಆದರೆ ಫಿಲ್ಡಿಂಗ್ ವೇಳೆ ಡೈವಿಂಗ್ ಮಾಡುವಾಗ ಅವರ ಭುಜಕ್ಕೆ ಗಾಯವಾಗಿತ್ತು. ಈ ಹಿನ್ನೆಲೆ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಕಣಕ್ಕಿಳಿಯಲು ಅವರು ಕೋಲ್ಕತ್ತಾಗೆ ಪ್ರಯಾಣಿಸಿದ್ದರು. ಆದರೆ, ಆಡುವ 11ರ ಬಳಗದಲ್ಲಿ ಅವರು ಕಾಣಲಿಲ್ಲ. ಅವರ ಬದಲಿಗೆ ಆಲ್ ರೌಂಡರ್ ಡೇವಿಡ್ ವಿಲ್ಲಿಗೆ ತಂಡದಲ್ಲಿ ಸ್ಥಾನ ಕೊಡಲಾಯಿತು. ಈಗ ಗಾಯದ ಸಮಸ್ಯೆಯಿಂದ ಟೋಪ್ಲೆ ಬ್ರಿಟನ್‌ಗೆ ತೆರಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ರಾಯಲ್ ಚಾಲೆಂಜರ್ಸ್ ಮುಖ್ಯ ಕೋಚ್ ಸಂಜಯ್ ಬಂಗಾರ್, ದುರದೃಷ್ಟವಶಾತ್ ಟೋಪ್ಲೆ ಅವರು ಪಂದ್ಯಾವಳಿಯಿಂದ ಹೊರಗುಳಿದಿರುವುದರಿಂದ ಅವರು ಮನೆಗೆ ಮರಳಬೇಕಾಗಿದೆ. ನಾವು ಅವರನ್ನು ಇಲ್ಲಿ ಇರಿಸಿಕೊಳ್ಳಲು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ. ಆದರೆ ಚಿಕಿತ್ಸೆ ಮತ್ತು ತಜ್ಞರು ಸಲಹೆ ಮೇರೆಗೆ ಅವರು ಬ್ರಿಟನ್‌ಗೆ ತೆರಳಬೇಕಾಯಿತು ಎಂದು ಕೋಚ್ ಹೇಳಿದರು.
ಇಂಗ್ಲೆಂಡ್ ತಂಡದ ವೇಗಿ ರಿಸೆ ಟೋಪ್ಲೆಯನ್ನು ಆರ್ಸಿಬಿ 1.9 ಕೋಟಿಗೆ ಖರೀದಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಪ್ರಥಮ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ರಿಸೆ ಟೋಪ್ಲೆ ಬಲ ಭುಜದ ಗಾಯಕ್ಕೆ ತುತ್ತಾಗಿದ್ದು, ಈಗ ಅವರು ಬ್ರಿಟನ್‌ಗೆ ನಿರ್ಗಮಿಸಿದ್ದಾರೆ. ವಿಲ್ ಜಾಕ್ವೆಸ್ ಮತ್ತು ರಜತ್ ಪಾಟಿದಾರ್ ಗಾಯದ ಸಮಸ್ಯೆದಿಂದ ಹೊರಗುಳಿದಿದ್ದಾರೆ. ಹೀಗಾಗಿ ಆರ್ಸಿಬಿ ಮೂವರು ಆಟಗಾರರನ್ನು ಕಳೆದುಕೊಂಡಿದೆ.
ಟೋಪ್ಲೆ ಅವರು ತಮ್ಮ ವೃತ್ತಿಪರ ವೃತ್ತಿಜೀವನದುದ್ದಕ್ಕೂ ಹಲವಾರು ಗಾಯಗಳನ್ನು ಅನುಭವಿಸಿದ್ದಾರೆ. ಇತ್ತೀಚೆಗಷ್ಟೇ ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ T20 ವಿಶ್ವಕಪ್‌ನಲ್ಲಿ ಅವರು ಅಭ್ಯಾಸ ಪಂದ್ಯದ ವೇಳೆ ಪಾದಕ್ಕೆ ಗಾಯ ಮಾಡಿಕೊಂಡಿದ್ದರು.
ಜೋಶ್ ಹ್ಯಾಜಲ್‌ವುಡ್ ಮತ್ತು ವನಿಂದು ಹಸರಂಗ ಕ್ರಮವಾಗಿ ಏಪ್ರಿಲ್ 10 ಮತ್ತು ಏಪ್ರಿಲ್ 15 ರಂದು ತಂಡವನ್ನು ಸೇರುವ ನಿರೀಕ್ಷೆಯಿದೆ. ಏಪ್ರಿಲ್ 10 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಣಸಾಟ ನಡೆಸಲಿದೆ. ಅದೇ ರೀತಿ ಏಪ್ರಿಲ್ 15ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯುವ ಪಂದ್ಯದ ವೇಳೆ ಹಸರಂಗ್ ತಂಡ ಸೇರಿಕೊಳ್ಳವ ಸಾಧ್ಯತೆಯಿದೆ ಎಂದು ಕೋಚ್ ಬಂಗಾರ್ ತಿಳಿಸಿದ್ದಾರೆ.
ಶಾರ್ದೂಲ್ ಠಾಕೂರ್ ಮತ್ತು ರಹಮಾನುಲ್ಲಾ ಗುರ್ಬಾಜ್ ಅವರ ಅರ್ಧಶತಕಗಳ ನಂತರ ಸ್ಪಿನ್ನರ್‌ಗಳ ಪ್ರಬಲ ಪ್ರದರ್ಶನದಿಂದಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 81 ರನ್‌ಗಳಿಂದ ಭರ್ಜರಿ ಜಯಗಳಿಸಿತು. ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 204 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ವಿಕೆಟ್ ಪತನದ ನಂತರ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಂಡಿತು.ಇದರಿಂದಾಗಿ ತಂಡವು 17.4 ಓವರ್‌ಗಳಲ್ಲಿ ಕೇವಲ 123 ರನ್‌ಗಳಿಗೆ ಸರ್ವಪತನ ಕಂಡಿತು. ಕೋಲ್ಕತ್ತಾ ನೈಟ್ ರೈಡರ್ಸ್ ಪರ ವರುಣ್ ಚಕ್ರವರ್ತಿ 4, ಇಂಪ್ಯಾಕ್ಟ್ ಆಟಗಾರ ಸುಯಶ್ ಮೂರು ಹಾಗೂ ನರೇನ್ ಎರಡು ವಿಕೆಟ್ ಪಡೆದು ಮಿಂಚಿದರು.