ಶಾರ್ಜಾ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಆರಂಭ ಪಡೆದುಕೊಂಡಿದೆ. ಆರಂಭಿಕರಾಗಿ ಕಣಕ್ಕಿಳಿದಿರುವ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಶತಕದ ಜೊತೆಯಾಟವಾಡಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಕ್ರೀಸಿಗಿಳಿದ ಆರ್ಸಿಬಿ ಆರಂಭದಿಂದಲೂ ಸ್ಪೋಟಕ ಆಟದ ಮೊರೆ ಹೋಯಿತು. ತಾವು ಎದುರಿಸಿದ ಮೊದಲೆರಡು ಎಸೆತಗಳಲ್ಲಿ ಕೊಹ್ಲಿ ಬೌಂಡರಿ ಸಿಡಿಸಿ, ಎದುರಾಳಿ ತಂಡಕ್ಕೆ ಸವಾಲಾದರು.
ಸತತ ಬ್ಯಾಟಿಂಗ್ ವೈಫಲ್ಯಕ್ಕೊಳಗಾಗಿದ್ದ ಕೊಹ್ಲಿ ಇಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರು. ತಾವು ಎದುರಿಸಿದ 36 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸೇರಿದಂತೆ 51 ರನ್ಗಳಿಕೆ ಮಾಡಿದರೆ, ಮತ್ತೋರ್ವ ಆಟಗಾರ ಪಡಿಕ್ಕಲ್ 35 ಎಸೆತಗಳಲ್ಲಿ 52 ರನ್ಗಳಿಕೆ ಮಾಡಿ ಆಟ ಮುಂದುವರೆಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಮೊದಲ ವಿಕೆಟ್ ನಷ್ಟಕ್ಕೆ 13.2 ಓವರ್ಗಳಲ್ಲಿ 111ರನ್ಗಳ ಜೊತೆಯಾಟ ನೀಡಿ, ತಂಡಕ್ಕೆ ಭದ್ರಬುನಾದಿ ಹಾಕಿದ್ದಾರೆ.
ಇದನ್ನೂ ಓದಿ: ಶಾರ್ಜಾ ಮೈದಾನದಲ್ಲಿ ಜೊತೆ ಜೊತೆಯಲಿ... ಆಪ್ತ ಸಮಾಲೋಚನೆಯಲ್ಲಿ ತೊಡಗಿದ ಧೋನಿ-ಕೊಹ್ಲಿ
53 ರನ್ಗಳಿಕೆ ಮಾಡಿದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಬೌಲರ್ ಬ್ರಾವೋ ಓವರ್ನಲ್ಲಿ ವಿಕೆಟ್ ಒಪ್ಪಿಸಿ, ನಿರ್ಗಮಿಸಿದರು. ಆದರೆ ಪಡಿಕ್ಕಲ್ ತಮ್ಮ ಬ್ಯಾಟಿಂಗ್ ವೈಭವ ಮುಂದುವರೆಸಿದ್ದಾರೆ.