ದುಬೈ: ಭಾನುವಾರ ನಡೆದ 2ನೇ ಹಂತದ ಐಪಿಎಲ್ನ ಮೊದಲ ಪಂದ್ಯದಲ್ಲಿ ಚೆಂಡು ತಗುಲಿ ಗಾಯಗೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಂಬಾಟಿ ರಾಯುಡು ಯಾವುದೇ ಮೂಳೆ ಮುರಿತಕ್ಕೆ ಒಳಗಾಗಿಲ್ಲ. ಮುಂದಿನ ಪಂದ್ಯದ ವೇಳೆಗೆ ಚೇತರಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಮಿಲ್ನೆ ಎಸೆದ 2ನೇ ಓವರ್ನ ಕೊನೆಯ ಎಸೆತ ರಾಯುಡುಗೆ ಮೊಣಕೈಗೆ ಬಲವಾಗಿ ಬಡಿದಿತ್ತು. ನಂತರ ನೋವಿನ ಕಾರಣ ಬ್ಯಾಟಿಂಗ್ ಮುಂದುವರಿಸಲಾಗದೆ ಪೆವಿಲಿಯನ್ಗೆ ಮರಳಿದ್ದರು.
ರಾಯುಡು ಗಾಯಗೊಂಡ ಸಂದರ್ಭ ತುಂಬಾ ಕೆಟ್ಟದಾಗಿತ್ತು, ಅವರು ಸ್ವಲ್ಪ ಹಿಡಿತ ಕಳೆದುಕೊಂಡಿದ್ದರಿಂದ ಆ ಘಟನೆ ಸಂಭವಿಸಿತು. ನಾವು ಕೂಡ ಮೂಳೆ ಮುರಿದಿರಬಹುದು ಎಂದು ಭಯಪಟ್ಟಿದ್ದೆವು. ಆದರೆ ನಮಗೆ ಒಳ್ಳೆಯ ಸುದ್ದಿ ಬಂದಿದೆ. ಅವರ ಎಕ್ಸ್-ರೇ ಯಾವುದೇ ಮುರಿತವಾಗಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದು ಕೋಚ್ ಸ್ಟೀಫನ್ ಫ್ಲೆಮಿಂಗ್ ಪಂದ್ಯದ ನಂತರ ನಡೆದ ಮಾಧ್ಯಮಗೋಷ್ಟಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಬೌಲಿಂಗ್ ವೇಳೆ ಸೆಳೆತಕ್ಕೆ ಒಳಗಾಗಿದ್ದ ದೀಪಕ್ ಚಹರ್ಗೂ ಕೂಡ ಯಾವುದೇ ಗಂಭೀರ ಸಮಸ್ಯೆಯಾಗಿಲ್ಲ. ಅವರು ಮುಂದಿನ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಫ್ಲೆಮಿಂಗ್ ಹೇಳಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 156 ರನ್ ಗಳಿಸಿತ್ತು. ಕೇವಲ 24 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಸಿಎಸ್ಕೆ ರುತುರಾಜ್ ಗಾಯಕ್ವಾಡ್(88) ರನ್ಗಳ ನೆರವಿನಿಂದ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತ್ತು. ಆದರೆ ಮುಂಬೈ ಕೇವಲ 136 ರನ್ ಗಳಿಸಲಷ್ಟೇ ಶಕ್ತವಾಗಿ 20 ರನ್ಗಳ ಸೋಲು ಕಂಡಿತು.
ಇದನ್ನು ಓದಿ:IPL 2021: ಇಂದು ರಾಯಲ್ ಚಾಲೆಂಜರ್ಸ್ ಹಾಗೂ ನೈಟ್ ರೈಡರ್ಸ್ ಮುಖಾಮುಖಿ