ಚೆನ್ನೈ: ಸತತ ಸೋಲುಗಳಿಂದ ಕಂಗೆಟ್ಟಿದ್ದ ಪಂಜಾಬ್ ಕಿಂಗ್ಸ್ ಕೊನೆಗೂ ಗೆಲುವಿನ ಹಳಿಗೆ ಮರಳಿದೆ. ಐಪಿಎಲ್ 14ನೇ ಆವೃತ್ತಿಯ ಚೆನ್ನೈನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧ ಪಂಜಾಬ್ 9 ವಿಕೆಟ್‌ಗಳ ಗೆಲುವು ಸಾಧಿಸಿದೆ.
ರೋಹಿತ್ ಪಡೆ ನೀಡಿದ 131 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಕಿಂಗ್ಸ್, 17.4 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಕನ್ನಡಿಗರಾದ ಕೆ.ಎಲ್.ರಾಹುಲ್ ಹಾಗೂ ಮಯಾಂಕ್ ಅಗರ್‌ವಾಲ್ ಉತ್ತಮ ಅಡಿಪಾಯ ಹಾಕಿದ್ರು. ಈ ಜೋಡಿ ಮೊದಲ ವಿಕೆಟ್‌ಗೂ ಮುನ್ನ 53 ರನ್‌ಗಳ ಜೊತೆಯಾಟ ನೀಡಿತು. 8ನೇ ಓವರ್‌ನ 2ನೇ ಎಸೆತದಲ್ಲಿ ಸ್ಪಿನ್ನರ್ ಆರ್.ಚಾಹರ್ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿದ ಮಯಾಂಕ್ ಬೌಂಡರಿ ಬಳಿ ಇದ್ದ ಸೂರ್ಯಕುಮಾರ್ ಯಾದವ್‌ಗೆ ಕ್ಯಾಚಿತ್ತು ನಿರ್ಗಮಿಸಿದ್ರು.
ಮಯಾಂಕ್ 20 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 1 ಅಮೋಘ ಸಿಕ್ಸರ್ ಸಹಿತ 25 ರನ್ ಗಳಿಸಿದ್ರು. ಬಳಿಕ ಬಂದ ಸ್ಫೋಟಕ ದಾಂಡಿಗ ಕ್ರಿಸ್‌ಗೇಲ್ ಆರಂಭದಲ್ಲಿ ರನ್ ಗಳಿಸಲು ಪರದಾಡಿದ್ರು ನಂತರ ಬಿರುಸಿನ ಆಟವಾಡಿ 35 ಎಸೆತಗಳಿಂದ 5 ಬೌಂಡರಿ ಹಾಗೂ 2 ಸಿಕ್ಸರ್‌ಗಳಿಂದ 43 ರನ್‌ಗಳಿಸಿದರು. ನಾಯಕನ ಆಟವಾಡಿದ ಕೆ.ಎಲ್.ರಾಹುಲ್ ತಂಡದ ಗೆಲುವಿಗೆ ಉಪಯುಕ್ತ ಕಾಣಿಕೆ ನೀಡಿದರಲ್ಲದೆ, ಆಕರ್ಷಕ ಅರ್ಧ ಶತಕ ಸಿಡಿಸಿ ನೆರವಾದರು. 52 ಎಸೆತಗಳಿಂದ 60 ರನ್‌ಗಳಿಸಿದರು. ಇದರಲ್ಲಿ ತಲಾ 3 ಬೌಂಡರಿ ಹಾಗೂ ಸಿಕ್ಸರ್‌ಗಳಿದ್ದವು. ಈ ಹಿಂದಿನ ಸನ್ ರೈಸರ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಸೋಲು ಕಂಡಿತ್ತು. ರಾಜಸ್ಥಾನ್ ರಾಯಲ್ಸ್ ವಿರುದ್ಧ ಮಾತ್ರ ಮೊದಲ ಪಂದ್ಯದಲ್ಲಿ ಜಯ ಗಳಿಸಿತ್ತು.
ಇನ್ನು, ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಮುಂಬೈ ಇಂಡಿಯನ್ಸ್ ಆರಂಭಿಕ ಅಘಾತ ಅನುಭವಿಸಿತು. ಕೇವಲ 7 ರನ್ ಆಗುವಷ್ಟರಲ್ಲಿ ಡಿಕಾಕ್ ವಿಕೆಟ್ ಕಳೆದುಕೊಂಡಿತು. 5 ಎಸೆತಗಳಲ್ಲಿ 3 ರನ್‌ಗಳಿಸಿ ದೀಪಕ್ ಹೂಡಾ ಬೌಲಿಂಗ್‌ನಲ್ಲಿ ಹೆನ್‌ರಿಕ್ಸ್‌ಗೆ ಕ್ಯಾಚ್ ನೀಡಿ ಡಿಕಾಕ್ ನಿರ್ಗಮಿಸಿದ್ರು. ಬಳಿಕ ಬಂದ ಇಶಾನ್ ಕಿಶನ್ 17 ಎಸೆತಗಳಿಂದ 6 ರನ್, ಸೂರ್ಯಕುಮಾರ್ ಯಾದವ್ 33 ರನ್ ಹಾಗೂ ಪೊಲಾರ್ಡ್ 16 ರನ್‌ಗಳಿಸಿ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು.
ನಾಯಕ ರೋಹಿತ್ ಮಾತ್ರ ಆರಂಭದಿಂದಲೇ ನಿಧಾನ ಬ್ಯಾಟಿಂಗ್ ಮೋರೆ ಹೋಗಿ ವಿಕೆಟ್ ಕಾಯ್ದುಕೊಂಡರು. 52 ಎಸೆತಗಳನ್ನು ಎದುರಿಸಿದ ಹಿಟ್‌ಮ್ಯಾನ್, 5 ಬೌಂಡರಿ ಹಾಗೂ 2 ಸಿಕ್ಸರ್‌ಗಳೊಂದಿಗೆ 63 ರನ್‌ಗಳಿಸಿ ತಂಡದ ಮೊತ್ತ 131 ರನ್ ಪೇರಿಸಲು ನೆರವಾದರು. 18ನೇ ಓವರ್ ಬೌಲಿಂಗ್ ಬಂದ ಮಹಮ್ಮದ್ ಶಮಿ ಅವರ 3ನೇ ಎಸೆತದಲ್ಲಿ ಫಾಬಿಯನ್ ಅಲೆನ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಸಹೋದರರಾದ ಹಾರ್ದಿಕ್ ಪಾಂಡ್ಯಾ, ಕೃನಾಲ್ ಪಾಂಡ್ಯಾ ಕ್ರಮವಾಗಿ 1 ಮತ್ತು 3 ರನ್‌ಗಳಿಸಿ ಬೇಗನೇ ಔಟಾದವರು. ಪಂಜಾಬ್ ಪರ ಶಮಿ ಮತ್ತು ರವಿ ಬಿಷ್ಟೋಯಿ ತಲಾ 2 ವಿಕೆಟ್ ಹಾಗೂ ದೀಪಕ್ ಹೂಡಾ, ಅರ್ಷದೀಪ್ ಸಿಂಗ್ ತಲಾ 1 ವಿಕೆಟ್ ಪಡೆದರು.