ಚೆನ್ನೈ: ಸತತ ಮೂರು ಸೋಲುಗಳಿಂದ ಕಂಗೆಟ್ಟಿರುವ ಪಂಜಾಬ್ ಕಿಂಗ್ಸ್ ತಂಡ ಈಗ ಗೆಲುವಿನ ತವಕದಲ್ಲಿದೆ. ಇತ್ತ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಕಳೆದ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದು, ಮತ್ತೆ ಗೆಲುವಿನ ಲಯಕ್ಕೆ ಮರಳಲು ಭರ್ಜರಿ ತಯಾರಿ ನಡೆಸಿದೆ. ಇಂದು ಈ ಎರಡು ತಂಡಗಳು ಮುಖಾಮುಖಿಯಾಗಲಿದ್ದು, ಗೆಲುವಿನ ಮಾಲೆ ಯಾರ ಕೊರಳಿಗೆ ಎನ್ನುವುದನ್ನ ಕಾದು ನೋಡಬೇಕಿದೆ.
ಇಂದು ಎಂ.ಎ.ಚಿದಂಬರಂ ಕ್ರಿಡಾಂಗಣದಲ್ಲಿ ಎರಡು ತಂಡಗಳು ಸೆಣಸಾಡಲಿವೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದಿರುವ ಕೆ.ಎಲ್.ರಾಹುಲ್ ಬಳಗ ಸತತ ಮೂರು ಸೋಲುಗಳ ಕಹಿ ಉಂಡಿದೆ. ಕಳೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಎದುರು ಪಂಜಾಬ್ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ 120 ರನ್‌ಗಳ ಸಾಧಾರಣ ಮೊತ್ತಕ್ಕೆ ಕುಸಿದಿತ್ತು.
ತಂಡದ ಆರಂಭಿಕ ಜೋಡಿ ರಾಹುಲ್ ಮತ್ತು ಮಯಾಂಕ್ ಅಗರ್‌ವಾಲ್ ಉತ್ತಮ ಆರಂಭ ನೀಡದರೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳಾದ ಕ್ರಿಸ್ ಗೇಲ್ ಮತ್ತು ನಿಕೋಲಸ್ ಪೂರನ್ ತಂಡಕ್ಕೆ ಬಲ ತುಂಬುವಲ್ಲಿ ಪದೇ ಪದೆ ವಿಫಲರಾಗುತ್ತಿದ್ದಾರೆ. ಮಿಡಲ್ ಆರ್ಡರ್ನಲ್ಲಿ ದೀಪಕ್ ಹೂಡಾ ಹಾಗೂ ಶಾರುಕ್ ಖಾನ್ ಕೊಂಚ ಭರವಸೆ ಮೂಡಿಸಿದ್ದರೂ ಹೇಳಿಕೊಳ್ಳುವಂತಹ ಬೀಗ್ ಇನ್ನಿಂಗ್ಸ್ ಬಂದಿಲ್ಲ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಓಪನರ್ ಬ್ಯಾಟ್ಸ್ಮನ್ಗಳಿಗೆ ಉತ್ತಮ ಸಾಥ್ ನೀಡಿದರೆ ಪಜಾಂಬ್ ತಂಡದಿಂದ ದೊಡ್ಡ ಇನ್ನಿಂಗ್ಸ್ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇತ್ತ ಬೌಲಿಂಗ್ ವಿಭಾಗದಲ್ಲೂ ಕೂಡ ಪಜಾಂಬ್ ತಂಡದಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬಂದಿಲ್ಲ. ತಂಡದ ಪ್ರಮುಖ ವೇಗಿಗಳಾದ ಮೊಹಮ್ಮದ್ ಶಮಿ, ಜೇ ರಿಚರ್ಡ್ಸನ್ ಮತ್ತು ರಿಲಿ ಮೆರಿಡಿತ್ ಅವರಿಂದ ನಿರೀಕ್ಷಿತ ಪ್ರದರ್ಶನ ಬರುತ್ತಿಲ್ಲ. ಇನ್ನು ಸ್ಪಿನ್ ವಿಭಾಗದಲ್ಲೂ ಮುರಗನ್ ಅಶ್ವಿನ್ ಕೂಡ ಪ್ಲಾಫ್ ಆಗಿದ್ದಾರೆ. ಆದ್ದರಿಂದ ಎರಡೂ ವಿಭಾಗಗಳಲ್ಲಿ ತಂಡವು ಕೆಲವು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ನಿರೀಕ್ಷೆಯಿದೆ.
ಓದಿ : ಸನ್ ರೈಸರ್ಸ್‌ಗೆ ಮತ್ತೊಂದು ಆಘಾತ: ಸ್ಟಾರ್ ಬೌಲರ್ ಐಪಿಎಲ್ನಿಂದ ಔಟ್
ಮುಂಬೈ ತಂಡವು ಎಲ್ಲ ರೀತಿಯಿಂದಲೂ ಬಲಿಷ್ಠವಾಗಿದೆ. ಆದರೆ ಸ್ಥಿರತೆ ಕಾಪಾಡಿಕೊಳ್ಳುವಲ್ಲಿ ವಿಫಲವಾಗಿದೆ. ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಅವರಿಂದ ಇಲ್ಲಿಯವರೆಗೂ ಬೀಗ್ ಇನ್ನಿಂಗ್ಸ್ ಬಂದಿಲ್ಲ. ಕೀರನ್ ಪೊಲಾರ್ಡ್, ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ಕೂಡ ಈ ಬಾರಿಯ ಐಪಿಎಲ್ನಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲೂ ಅಷ್ಟಾಗಿ ಮಿಂಚಿಲ್ಲ. ಈ ಆಟಗಾರರು ಏನಾದರು ಲಯ ಕಂಡುಕೊಂಡರೆ ಮುಂಬೈ ತಂಡಕ್ಕೆ ಮತ್ತೊಷ್ಟು ಬಲ ಬಂದಂತಾಗುತ್ತದೆ. ಬೌಲಿಂಗ್ ವಿಭಾಗದಲ್ಲಿ ಬೌಲರ್ಗಳು ತಮ್ಮ ಜವಾಬ್ದಾರಿಯನ್ನ ಚೆನ್ನಾಗಿಯೇ ನಿರ್ವಹಿಸುತ್ತಿದ್ದಾರೆ.
ತಂಡಗಳು:
ಮುಂಬೈ ಇಂಡಿಯನ್ಸ್ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ರಾಹುಲ್ ಚಾಹರ್, ಟ್ರೆಂಟ್ ಬೌಲ್ಟ್, ಜಸ್‌ಪ್ರೀತ್ ಬೂಮ್ರಾ, ಸೂರ್ಯಕುಮಾರ್ ಯಾದವ್, ಜಯಂತ್ ಯಾದವ್.
ಪಂಜಾಬ್ ಕಿಂಗ್ಸ್ ಸಂಭಾವ್ಯ ತಂಡ: ಕೆ.ಎಲ್.ರಾಹುಲ್ (ನಾಯಕ/ವಿ.ಕೀ), ಮಯಾಂಕ್ ಅಗರ್‌ವಾಲ್, ಕ್ರಿಸ್ ಗೇಲ್, ಮನದೀಪ್ ಸಿಂಗ್, ನಿಕೊಲಸ್ ಪೂರನ್(ವಿಕೆಟ್‌ಕೀಪರ್), ದೀಪಕ್ ಹೂಡಾ, ಮುರುಗನ್ ಅಶ್ವಿನ್, ಮೊಹಮ್ಮದ್ ಶಮಿ, ಆರ್ಷದೀಪ್ ಸಿಂಗ್, ಶಾರೂಕ್ ಖಾನ್, ಜೇ ರಿಚರ್ಡ್ಸನ್.