ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಕೋಚ್ ಎಲ್.ಬಾಲಾಜಿಗೆ ಕೊರೊನಾ ಸೋಂಕು ತಗುಲಿದ್ದು, ನಾಳೆ ನಡೆಯಬೇಕಿದ್ದ ಸಿಎಸ್‌ಕೆ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯವನ್ನು ಮುಂದೂಡುವ ಸಾಧ್ಯತೆಯಿದೆ. ಹಾಗೆಯೇ ದೆಹಲಿಯಲ್ಲಿ ನಡೆಯಬೇಕಿದ್ದ ಪಂದ್ಯವನ್ನು ಮುಂಬೈಗೆ ಸ್ಥಳಾಂತರಿಸಲು ಬಿಸಿಸಿಐ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಎಎನ್‌ಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಬಿಸಿಸಿಐ ಅಧಿಕಾರಿಯೊಬ್ಬರು, ಬಾಲಾಜಿಗೆ ಕೊರೊನಾ ತಗುಲಿದ ಕಾರಣ ಸಿಎಸ್‌ಕೆ-ಆರ್‌ಆರ್ ಪಂದ್ಯವನ್ನು ಮುಂದೂಡಲಾಗಿದ್ದು, ಮುಂದಿನ ಪಂದ್ಯಗಳನ್ನು ಮುಂಬೈಗೆ ಸ್ಥಳಾಂತರಿಸಲು ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೇವೆ. ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಣ ಇಂದಿನ ಪಂದ್ಯ ದೆಹಲಿಯಲ್ಲೇ ನಡೆಯಲಿದೆ. ಕೋಲ್ಕತಾ ನೈಟ್ ರೈಡರ್ಸ್ ಮತ್ತು ಸಿಎಸ್‌ಕೆ ತಂಡದ ಆಟಗಾರರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಈ ತಂಡಗಳ ಪಂದ್ಯವನ್ನು ಮುಂದೂಡುವ ಸಾಧ್ಯತೆಯಿದೆ. ಮುಂದಿನ ಪಂದ್ಯಗಳು ನಿಗದಿಯಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ವಯ ಕೋಲ್ಕತಾ ಮತ್ತು ಬೆಂಗಳೂರಿನಲ್ಲಿ ನಡೆಯಲಿವೆ ಎಂದು ತಿಳಿಸಿದರು.
"ಲೀಗ್ ಪಂದ್ಯಗಳನ್ನು ನಾವು ಮುಂಬೈಗೆ ಸ್ಥಳಾಂತರಿಸಲು ನೋಡುತ್ತಿದ್ದೇವೆ. ಆದರೆ ಮಹಾರಾಷ್ಟ್ರ ಸರ್ಕಾರದಿಂದ ಅನುಮತಿಗಾಗಿ ಕಾಯುತ್ತಿದ್ದೇವೆ. ಅನುಮತಿ ಸಿಕ್ಕ ಮೇಲೆ ನಾವು ಹೋಗುವುದು ಒಳ್ಳೆಯದು. ಕ್ಲಿಯರೆನ್ಸ್ ಪಡೆಯಲು ಇನ್ನೂ ಒಂದೆರಡು ದಿನಗಳು ಬೇಕಾಗಬಹುದು" ಎಂದು ಅವರು ಹೇಳಿದರು.
ಕೋಲ್ಕತಾ ನೈಟ್ ರೈಡರ್ಸ್ ತಂಡದ ವರುಣ್ ಚಕ್ರವರ್ತಿ ಹಾಗೂ ವೇಗಿ ಸಂದೀಪ್ ವಾರಿಯರ್ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ತಂಡದ ಇನ್ನುಳಿದ ಆಟಗಾರರ ವರದಿ ನೆಗೆಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ವರುಣ್ ಹಾಗೂ ವಾರಿಯರ್ ಅವರನ್ನು ತಂಡದಿಂದ ಪ್ರತ್ಯೇಕವಾಗಿ ಐಸೋಲೇಷನ್‌ನಲ್ಲಿ ಇರಿಸಲಾಗಿದೆ. ಹಾಗೆಯೇ ಇಬ್ಬರ ಜೊತೆ ವೈದ್ಯರು ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: IPL ಮೇಲೆ ಕೊರೊನಾ ಕರಿನೆರಳು: 4 ನಗರಗಳಲ್ಲಿ 31 ಪಂದ್ಯ ಬಾಕಿ; ಅಲ್ಲಿನ ಪರಿಸ್ಥಿತಿ ಹೇಗಿದೆ ನೋಡಿ!