ಬೆಂಗಳೂರು: ವಿಕೆಟ್ ಕೀಪರ್, ಬ್ಯಾಟರ್ ದಿನೇಶ್ ಕಾರ್ತಿಕ್ ಹೆಸರಿನಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರ ಕ್ಯಾಚ್ ನಂತರ ಕಾರ್ತಿಕ್ ಟಿ20 ಕ್ರಿಕೆಟ್‌ನಲ್ಲಿ 200 ಕ್ಯಾಚ್‌ಗಳನ್ನು ಪಡೆದ ಮೂರನೇ ವಿಕೆಟ್ ಕೀಪರ್ ಆಗಿ ಅವರು ಹೊರಹೊಮ್ಮಿದ್ದಾರೆ. ಕ್ವಿಂಟನ್ ಡಿ ಕಾಕ್ ಮತ್ತು ಎಂ.ಎಸ್.ಧೋನಿ ನಂತರ ಈ ಸಾಧನೆ ಮಾಡಿದ ಮೂರನೇ ವಿಕೆಟ್ ಕೀಪರ್ ಇದೀಗ ದಿನೇಶ್ ಕಾರ್ತಿಕ್.
ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಮತ್ತು ಬೆಂಗಳೂರು ನಡುವಿನ ಪಂದ್ಯ ರೋಚಕತೆ ಉಂಟು ಮಾಡಿತ್ತು. ಟಾಸ್ ಗೆದ್ದ ಬೆಂಗಳೂರು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟ್ ಮಾಡಿದ ಮುಂಬೈ ಆರಂಭಿಕ ಆಘಾತ ಎದುರಿಸಿತು. ಬಳಿಕ ತಿಲಕ್ ವರ್ಮಾ ಅಜೇಯ 84 ರನ್ ಗಳಿಸಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ತಂಡ ಸ್ಕೋರ್ ಬೋರ್ಡ್ನಲ್ಲಿ ಏರಿಕೆ ಕಂಡಿತು. ನಿಗದಿತ 20 ಓವರ್ಗಳಲ್ಲಿ ರೋಹಿತ್ ಶರ್ಮಾ ಟೀಂ 7 ವಿಕೆಟ್ಗಳ ಕಳೆದುಕೊಂಡು 171 ರನ್ ಗಳಿಸಿತು.
ಮುಂಬೈ ನೀಡಿದ ಮೊತ್ತವನ್ನು ಬೆನ್ನತ್ತಿದ್ದ ಆರ್ಸಿಬಿ ಆರಂಭಿಕರು ಭರ್ಜರಿ ಹೊಡೆತಗಳಿಗೆ ಮುಂದಾದರು. ನಾಯಕ ಡುಪ್ಲೆಸಿಸ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಜೋಡಿ ಜವಾಬ್ದಾರಿಯುತ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಮುಂಬೈ ನೀಡಿದ 171 ರನ್ಗಳ ಗುರಿಯನ್ನು ಆರ್ಸಿಬಿ ತಂಡ 16.2 ಓವರ್‌ನಲ್ಲೇ ತಲುಪಿ ಮೂಲಕ ಭರ್ಜರಿ ವಿಜಯ ಸಾಧಿಸಿತು.
ಟಿ20ಯಲ್ಲಿ 200 ಕ್ಯಾಚ್ ಸಾಧಕ ವಿಕೆಟ್‌ಕೀಪರ್‌ಗಳು:
* ಕ್ವಿಂಟನ್ ಡಿ ಕಾಕ್ (207*)
* ಮಹೇಂದ್ರ ಸಿಂಗ್ ಧೋನಿ (203*)
* ದಿನೇಶ್ ಕಾರ್ತಿಕ್ (200*)
ಈ ಪಂದ್ಯದಲ್ಲಿ ಕಾರ್ತಿಕ್ ಮುಂಬೈ ನಾಯಕ ರೋಹಿತ್ ಶರ್ಮಾ ಅವರ ಕ್ಯಾಚ್ ಪಡೆದ ತಕ್ಷಣ ಟಿ20 ಕ್ರಿಕೆಟ್‌ನಲ್ಲಿ 200 ಕ್ಯಾಚ್‌ಗಳನ್ನು ಪಡೆದ 3ನೇ ಕೀಪರ್ ಆಗಿ ಹೊರಹೊಮ್ಮಿದರು. ಕ್ವಿಂಟನ್ ಡಿ ಕಾಕ್ 207 ಕ್ಯಾಚ್‌ಗಳನ್ನು ಪಡೆದು ಮೊದಲನೇ ಸ್ಥಾನದಲ್ಲಿದ್ರೆ, ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ 203 ಕ್ಯಾಚ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: TATA IPL 2023: ವಿರಾಟ್, ಡು ಪ್ಲೆಸಿಸ್ ಅರ್ಧಶತಕ.. ಪ್ರಥಮ ಪಂದ್ಯದಲ್ಲಿ ಆರ್ಸಿಬಿಗೆ ಜಯ
ಡುಪ್ಲೆಸಿಸ್-ಕೊಹ್ಲಿ ಜೊತೆಯಾಟದ ಸೊಬಗು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರರು ಜೊತೆಯಾಟದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಕೊಹ್ಲಿ ಮತ್ತು ಡುಪ್ಲೆಸಿಸ್ 148 ರನ್ಗಳನ್ನು ಕಲೆ ಹಾಕಿದ್ದು, ಮುಂಬೈ ವಿರುದ್ಧ ನಾಲ್ಕನೇ ದೊಡ್ಡ ಆರಂಭಿಕ ಜೊತೆಯಾಟದ ದಾಖಲೆ ಬರೆದರು.