ನವದೆಹಲಿ: ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿಯಾದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹಲವು ಬದಲಾವಣೆಗೆ ತೆರೆದುಕೊಂಡಿದೆ. ಕ್ರಿಕೆಟ್ನ ಮೆರುಗು ಹೆಚ್ಚಿಸಲು ಹೊಸ ಹೊಸ ನಿಯಮಗಳನ್ನೂ ಪರಿಚಯಿಸಿದೆ. ಇದೇ ಮಾದರಿಯಲ್ಲಿ ಬಂದಿದ್ದು "ಇಂಪ್ಯಾಕ್ಟ್ ಪ್ಲೇಯರ್" ನಿಯಮ. ಟಿ20 ಆಟವೇ ಒಂದು ಸೊಬಗು. ಅದಕ್ಕೆ ಇನ್ನಷ್ಟು ರಂಗು ನೀಡಲು "ಪ್ರಭಾವಿ ಆಟಗಾರ" ಅವಕಾಶ ನೀಡಲಾಗಿದೆ.
ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಗೊತ್ತಾ?: ಉಭಯ ತಂಡಗಳು ಇನಿಂಗ್ಸ್ನ ಮಧ್ಯೆಯೇ ಆಡುವ ಹನ್ನೊಂದರ ಬಳಗದಿಂದ ಓರ್ವನನ್ನು ಕೈಬಿಟ್ಟು ಮೀಸಲು ಪಡೆಯಲ್ಲಿರುವ ಆಟಗಾರರಲ್ಲಿ ಒಬ್ಬರನ್ನು ಕಣಕ್ಕಿಳಿಸಬಹುದು. ನಾಯಕರು ಟಾಸ್ ವೇಳೆ ನೀಡುವ ಆಡುವ ಹನ್ನೊಂದರ ಪಟ್ಟಿಯ ಜೊತೆಗೆ ಮೀಸಲು ಐವರು ಆಟಗಾರರ ಪಟ್ಟಿ ಕೂಡ ನೀಡಬೇಕು. ಅದರಲ್ಲಿ ಒಬ್ಬ ಆಟಗಾರನನ್ನು ಇಂಪ್ಯಾಕ್ಟ್ ಆಟಗಾರನ್ನಾಗಿ ಬಳಸಿಕೊಳ್ಳಬಹುದು. ಈಗಾಗಲೇ ತಂಡದಲ್ಲಿ ನಾಲ್ವರು ವಿದೇಶಿ ಆಟಗಾರರು ಇದ್ದಲ್ಲಿ ಅವರ ಬದಲಿಗೆ ಇನ್ನೊಬ್ಬರನ್ನು ಆಯ್ಕೆ ಮಾಡುವಂತಿಲ್ಲ. ಆ ಜಾಗಕ್ಕೆ ಭಾರತೀಯ ಆಟಗಾರನನ್ನೇ ಸೂಚಿಸಬೇಕು.
ಟೂರ್ನಿಯಲ್ಲಿ 10 ತಂಡಗಳು ತಲಾ ಒಂದು ಪಂದ್ಯವನ್ನು ಮುಗಿಸಿವೆ. 9 ತಂಡಗಳು ಈಗಾಗಲೇ ಇಂಪ್ಯಾಕ್ಟ್ ಪ್ಲೇಯರ್ನನ್ನು ಬಳಸಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಮಾತ್ರ ಈ ನಿಯಮ ಬಳಸದ ಏಕೈಕ ತಂಡವಾಗಿದೆ.
ಇಂಪ್ಯಾಕ್ಟ್ ಆಟಗಾರರ ಪ್ರದರ್ಶನ ಹೀಗಿದೆ - ತುಷಾರ್ ದೇಶಪಾಂಡೆ: ಐಪಿಎಲ್ ಇತಿಹಾಸದಲ್ಲಿ ಇಂಪ್ಯಾಕ್ಟ್ ಆಟಗಾರರನ್ನು ಮೊದಲು ಬಳಸಿದ ತಂಡ ಚೆನ್ನೈ ಸೂಪರ್ ಕಿಂಗ್ಸ್. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಬಲಗೈ ವೇಗದ ಬೌಲರ್ ತುಷಾರ್ ದೇಶಪಾಂಡೆಯನ್ನು ಬದಲಿ ಆಟಗಾರರನ್ನಾಗಿ ಕಣಕ್ಕಿಳಿಸಿತು. ಈ ಮೂಲಕ ತುಷಾರ್ ದೇಶಪಾಂಡೆ ಐಪಿಎಲ್ನ ಮೊದಲ ಇಂಪ್ಯಾಕ್ಟ್ ಪ್ಲೇಯರ್ ಆದರು. ಪಂದ್ಯದಲ್ಲಿ ಅಂಬಟಿ ರಾಯುಡು ಬದಲಿಯಾಗಿ ಆಡಿದ ತುಷಾರ್ 3.2 ಓವರ್ ಬೌಲಿಂಗ್ ಮಾಡಿ 51 ರನ್ ಚಚ್ಚಿಸಿಕೊಂಡು ದುಬಾರಿಯಾದರು.
ಸಾಯಿ ಸುದರ್ಶನ್: ಉದ್ಘಾಟನಾ ಪಂದ್ಯದಲ್ಲಿಯೇ ಗುಜರಾತ್ ಟೈಟಾನ್ಸ್ ತಂಡ ಸಾಯಿ ಸುದರ್ಶನ್ರನ್ನು ಪ್ರಭಾವಿ ಆಟಗಾರನನ್ನಾಗಿ ಬಳಸಿಕೊಂಡಿತು. ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಫೀಲ್ಡಿಂಗ್ ವೇಳೆ ಗಾಯಗೊಂಡು ಮೈದಾನ ತೊರೆದರು. ಕೇನ್ ಬದಲಿಗೆ ಸುದರ್ಶನ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 17 ಎಸೆತಗಳಲ್ಲಿ 3 ಬೌಂಡರಿ ಸಮೇತ 22 ರನ್ ಗಳಿಸಿ ವಿಕೆಟ್ ನೀಡಿದರು.
ವೆಂಕಟೇಶ್ ಅಯ್ಯರ್, ರಿಷಿ ಧವನ್: ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಉಭಯ ತಂಡಗಳು ಇಂಪ್ಯಾಕ್ಟ್ ಪ್ಲೇಯರ್ರನ್ನು ಆಡಿಸಿದರು. ಕೋಲ್ಕತ್ತಾ ಸ್ಪಿನ್ನರ್ ವರುಣ್ ಚಕ್ರವರ್ತಿ ಬದಲಿಗೆ ವೆಂಕಟೇಶ್ ಅಯ್ಯರ್ರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಇಳಿಸಿತು. ಅಯ್ಯರ್ 28 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 34 ರನ್ ಬಾರಿಸಿದರು. ಇನ್ನು ಪಂಜಾಬ್ ಕಿಂಗ್ಸ್ ಭಾನುಕಾ ರಾಜಪಕ್ಸೆ ಬದಲಿಗೆ ರಿಷಿ ಧವನ್ರನ್ನು ಬಳಸಿಕೊಂಡಿತು. ಧವನ್ ಬೌಲ್ ಮಾಡಿದ ಏಕೈಕ ಓವರ್‌ನಲ್ಲಿ 15 ರನ್ ಬಿಟ್ಟುಕೊಟ್ಟರು. ಬಳಿಕ ಬೌಲಿಂಗ್ಗೆ ಇಳಿಯಲಿಲ್ಲ.
ಕೃಷ್ಣಪ್ಪ ಗೌತಮ್, ಅಮನ್ ಖಾನ್: ಡೆಲ್ಲಿ ಕ್ಯಾಪಿಟಲ್ಸ್, ಲಖನೌ ಸೂಪರ್ ಜೈಂಟ್ಸ್ ಮಧ್ಯದ ಪಂದ್ಯದಲ್ಲಿ ಆಟಗಾರರು ಇಂಪ್ಯಾಕ್ಟ್ ಆದರು. ಲಖನೌ ತಂಡ ಆಯುಷ್ ಬದೌನಿ ಬದಲಿಗೆ ಕೃಷ್ಣಪ್ಪ ಗೌತಮ್ರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸಿತು. ಗೌತಮ್ ಬ್ಯಾಟಿಂಗ್ನಲ್ಲಿ ಎದುರಿಸಿದ ಏಕೈಕ ಎಸೆತದಲ್ಲಿ ಒಂದು ಸಿಕ್ಸರ್ ಬಾರಿಸಿದರು. ನಂತರ 4 ಓವರ್ ಬೌಲ್ ಮಾಡಿ ಕೇವಲ 23 ರನ್ ಮಾತ್ರ ನೀಡಿ ಪ್ರಭಾವಿಯಾದರು. ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಮನ್ ಖಾನ್ರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಂಡಿತು. ಎಡಗೈ ವೇಗದ ಬೌಲರ್ ಖಲೀಲ್ ಅಹ್ಮದ್ ಬದಲಿಗೆ ಬಂದ ಅಮನ್ ಕೇವಲ 4 ರನ್ ಮಾತ್ರ ಗಳಿಸಿ ಔಟಾಗಿದ್ದರು. ಇದರಿಂದ ತಂಡಕ್ಕೆ ಯಾವುದೇ ಲಾಭವಾಗಲಿಲ್ಲ.
ಸಮದ್ ಒಕೆ, ಸೈನಿ ಫ್ಲಾಪ್: ರಾಜಸ್ಥಾನ ರಾಯಲ್ಸ್ ಮತ್ತು ಹೈದರಾಬಾದ್ ಪಂದ್ಯದಲ್ಲಿ ಅಬ್ದುಲ್ ಸಮದ್ ಮತ್ತು ನವದೀಪ್ ಸೈನಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿದರು. ಸಮದ್ ಹೈದರಾಬಾದ್ ಪರವಾಗಿ 2 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 32 ರನ್‌ಗಳನ್ನು ಗಳಿಸಿದರು. ಆದರೆ, ಪಂದ್ಯವನ್ನು ಗೆಲ್ಲಲು ಇದು ಸಾಕಾಗಲಿಲ್ಲ. ರಾಜಸ್ಥಾನ ರಾಯಲ್ಸ್ ಪರವಾಗಿ ನವದೀಪ್ ಸೈನಿ ಬೌಲಿಂಗ್ ಮಾಡಿ 2 ಓವರ್‌ಗಳಲ್ಲಿ 34 ರನ್ ಚಚ್ಚಿಸಿಕೊಂಡು ದುಬಾರಿಯಾದರು.
ಜೇಸನ್ ಬೆಹ್ರೆನ್‌ಡಾರ್ಫ್: ಆರ್ಸಿಬಿ ಎದುರಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೂರ್ಯಕುಮಾರ್ ಯಾದವ್ ಬದಲಿಗೆ ಎಡಗೈ ವೇಗಿ ಜೇಸನ್ ಬೆಹ್ರೆನ್ಡಾರ್ಫ್ರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿತು. ಜೇಸನ್ 3 ಓವರ್‌ಗಳಲ್ಲಿ 37 ರನ್‌ಗಳನ್ನು ಬಿಟ್ಟುಕೊಟ್ಟರು. ಬೆಂಗಳೂರು ತಂಡ ಪ್ರಭಾವಿ ಆಟಗಾರರನ್ನು ಬಳಸದೇ ಭರ್ಜರಿ ಗೆಲುವು ಸಾಧಿಸಿತು.
ಓದಿ: ಐಪಿಎಲ್ 2023: ತುಷಾರ್ ದೇಶಪಾಂಡೆ ಮೊದಲ "ಇಂಪ್ಯಾಕ್ಟ್ ಪ್ಲೇಯರ್" ದಾಖಲೆ