ಕ್ರೈಸ್ಟ್‌ಚರ್ಚ್ : ನಿನ್ನೆ ನಡೆದ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಜೇ ರಿಚರ್ಡ್‌ಸನ್ ದಾಖಲೆ ಮೊತ್ತಕ್ಕೆ ಪಂಜಾಬ್ ಕಿಂಗ್ಸ್‌ಗೆ ಸೇಲ್ ಆಗಿದ್ದಾರೆ. ಜೇ ರಿಚರ್ಡ್‌ಸನ್‌ರನ್ನ ಪಂಜಾಬ್ ಕಿಂಗ್ಸ್ ಬರೋಬ್ಬರಿ ₹14 ಕೋಟಿ ಕೊಟ್ಟು ಖರೀದಿಸಿದೆ. ರಿಚರ್ಡ್‌ಸನ್ ಮೂಲ ಬೆಲೆಗಿಂತ ಸುಮಾರು 10 ಪಟ್ಟು ಹೆಚ್ಚು ಮೊತ್ತಕ್ಕೆ ಬಿಕರಿಯಾದರು.
ಈ ಕುರಿತು ಪ್ರತಿಕ್ರಿಯಿಸಿರುವ ರಿಚರ್ಡ್‌ಸನ್, ಈ ಬಿಡ್ ನನ್ನ ಜೀವನವನ್ನೇ ಬದಲಾಯಿಸಲಿದೆ. ನಾನು ಈ ಬಾರಿ ಐಪಿಎಲ್ನಲ್ಲಿ ಆಡಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ. ಈ ಬಾರಿಯ ಬಿಗ್ ಬ್ಯಾಷ್ ಲೀಗ್ನಲ್ಲಿ ಮಿಂಚು ಹರಿಸಿದ್ದ ಜೇ ರಿಚರ್ಡ್‌ಸನ್ ಎಲ್ಲಾ ತಂಡಗಳ ಪ್ರಮುಖ ವಿಕೆಟ್ ಕಿತ್ತು ಬ್ಯಾಟ್ಸ್ಮನ್ಗಳಿಗೆ ಮಾರಕವಾಗಿದ್ದರು.
ಈ ಆಟವನ್ನ ನೋಡಿ ಆಸ್ಟ್ರೇಲಿಯಾ ಕ್ರಿಕೆಟ್ ಹಲವು ದಿನಗಳ ನಂತರ ಟಿ-20 ತಂಡಕ್ಕೆ ಜೇ ರಿಚರ್ಡ್‌ಸನ್ ಆಯ್ಕೆ ಮಾಡಲಾಗಿದೆ. ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಗೆ ಸ್ಥಾನ ಪಡೆದಿರುವ ರಿಚರ್ಡ್‌ಸನ್, ಸದ್ಯ ಹೋಟೆಲ್ನಲ್ಲಿ ಕ್ವಾರಂಟೈನ್ನಲ್ಲಿದ್ದಾರೆ.
ಓದಿ : ಐಪಿಎಲ್ ಹರಾಜು ಮುಕ್ತಾಯ: 145.3 ಕೋಟಿ ರೂ.ಗೆ 57 ಆಟಗಾರರು ಸೇಲ್, ಯಾರು ಯಾವ ತಂಡಕ್ಕೆ ಸೇರ್ಪಡೆ!?
ನಾನು ನ್ಯೂಜಿಲ್ಯಾಂಡ್ ಪ್ರವಾಸಕ್ಕೆ ಹೋಟೆಲ್ ಕೋಣೆಯಲ್ಲಿ ಸಂಪರ್ಕ ತಡೆಯಲ್ಲಿದ್ದೆ. ಬಿಡ್ಡಿಂಗ್ ವೇಳೆ ನನ್ನ ಹೆಸರು ಬಂದಾಗ ಭಯದ ಜೊತೆಗೆ ಉತ್ಸುಕನಾಗಿದ್ದೆ. ನಾನು ಬಿಡ್ ಆಗುತ್ತೇನೆ ಎಂದು ಗೊತ್ತಿತ್ತು. ಆದರೆ, ಇಷ್ಟೊಂದು ಮೊತ್ತಕ್ಕೆ ಬಿಡ್ ಆಗುತ್ತೇನೆ ಅಂದು ಕೊಂಡಿರಲಿಲ್ಲ.
ನಾನು ಅಷ್ಟು ಮೊತ್ತಕ್ಕೆ ಸೇಲ್ ಆದಾಗ ನನಗೆ ಓಹ್! ಎನಿಸಿತು ಎಂದು ಜೇ ರಿಚರ್ಡ್‌ಸನ್ ಹೇಳಿದ್ದಾರೆ. 2017ರಲ್ಲಿ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಜೇ ರಿಚರ್ಡ್‌ಸನ್ 2 ಟೆಸ್ಟ್, 13 ಏಕದಿನ ಮತ್ತು 9 ಟಿ-20 ಪಂದ್ಯಗಳನ್ನಾಡಿದ್ದಾರೆ.