ದುಬೈ: ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಐಪಿಎಲ್-2021ರ ಪಂದ್ಯದಲ್ಲಿ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಇನ್ನು ಈ ಪಂದ್ಯದ ಗೆಲುವಿನ ರುವಾರಿಯಾಗಿ ಹರ್ಷಲ್ ಪಟೇಲ್ ಹೊರಹೊಮ್ಮಿದ್ದಾರೆ. 17 ನೇ ಓವರ್ನಲ್ಲಿ ಕಮಾಲ್ ಮಾಡಿದ ಹರ್ಷಲ್ ಪಟೇಲ್ ಹ್ಯಾಟ್ರಿಕ್ ವಿಕೆಟ್ ಪಡೆದು ಗೆಲುವಿನ ರೂವಾರಿ ಎನಿಸಿದರು.
ಆರ್‌ಸಿಬಿ ತಂಡದ ಹರ್ಷಲ್ ಪಟೇಲ್ ಹ್ಯಾಟ್ರಿಕ್ ಸೇರಿ ಒಟ್ಟು 4 ವಿಕೆಟ್ ಪಡೆದು ಪಂದ್ಯದಲ್ಲಿ ಮಿಂಚಿದ್ದಾರೆ. ಇನ್ನು ಯುಜವೇಂದ್ರ ಚಹಲ್ ಅವರು 3 ವಿಕೆಟ್ ಪಡೆದಿದ್ದಾರೆ. ಬೆಂಗಳೂರು ತಂಡ ಪೇರಿಸಿದ್ದ 165 ರನ್ಗಳ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ಗೆ ಉತ್ತಮ ಆರಂಭ ಸಿಕ್ಕಿದ್ದಾದರೂ ಸಹ ಬಳಿಕ ಮಧ್ಯಮ ಕ್ರಮಾಂಕದ ಆಟಗಾರರ ವೈಫಲ್ಯದಿಂದ ಸೋಲು ಕಾಣುವಂತಾಯಿತು.
ಮುಂಬೈ 106 ರನ್ ಗಳಿಸಿದ್ದ ಸಂದರ್ಭದಲ್ಲಿ 3 ರನ್‌ಗಳಿಸಿದ್ದ ಹಾರ್ದಿಕ್ ಪಾಂಡ್ಯ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದರು. ಈ ಮೂಲಕ ಹರ್ಷಲ್ ತಮ್ಮ ಮೊದಲ ವಿಕೆಟ್ ಪಡೆದುಕೊಂಡರು. ನಂತರ ಮುಂದಿನ ಎಸೆತದಲ್ಲಿ ಕಿರಾನ್ ಪೊಲಾರ್ಡ್ ವಿಕೆಟ್ನ್ನು ಸಹ ಹರ್ಷಲ್ ಪಟೇಲ್ ಪಡೆದರು. ಇನ್ನು ಹ್ಯಾಟ್ರಿಕ್ ಎಸೆತವನ್ನು ಎದುರಿಸಲು ಬ್ಯಾಟ್ ಹಿಡಿದಿದ್ದವರು ರಾಹುಲ್ ಚಾಹರ್. ಈ ಸಂದರ್ಭದಲ್ಲಿ ಚಾಣಾಕ್ಷತನ ಮೆರೆದ ಹರ್ಷಲ್ ಸ್ಲೋ ಯಾರ್ಕರ್ ಎಸೆದು ಚಾಹರ್ನ್ನು ಪೆವಿಲಿಯನ್ಗೆ ಕಳುಹಿಸಿದರು. ಈ ಮೂಲಕ ಹ್ಯಾಟ್ರಿಕ್ ವಿಕೆಟ್ ಪಡೆದು ಹರ್ಷಲ್ ಸಾಧನೆ ಮಾಡಿದರು. ಅಂತಿಮವಾಗಿ ಆಡಂ ಮಿಲ್ನೆಯನ್ನು ಕೂಡ ಬೌಲ್ಡ್ ಮಾಡುವ ಮೂಲಕ ಪಂದ್ಯದಲ್ಲಿ ನಾಲ್ಕನೇ ವಿಕೆಟ್ ಪಡೆದುಕೊಂಡಿದ್ದಾರೆ.
ಐಪಿಎಲ್‌ನಲ್ಲಿ ಹ್ಯಾಟ್ರಿಕ್ ಸಾಧಿಸಿದ ಮೂರನೇ ಆರ್‌ಸಿಬಿ ಬೌಲರ್: ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಹ್ಯಾಟ್ರಿಕ್ ಪಡೆದ ಹರ್ಷಲ್ ಈ ಸಾಧನೆ ಮಾಡಿದ ಆರ್‌ಸಿಬಿ ತಂಡದ ಮೂರನೇ ಬೌಲರ್ ಎನಿಸಿದ್ದಾರೆ. ಇದಕ್ಕೂ ಮುನ್ನ 2010ರ ಆವೃತ್ತಿಯಲ್ಲಿ ಪ್ರವೀಣ್ ಕುಮಾರ್ ಮೊದಲ ಬಾರಿಗೆ ಆರ್‌ಸಿಬಿ ಪರವಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು. ಇನ್ನು ಆರ್‌ಸಿಬಿ ಪರವಾಗಿ ಎರಡನೇ ಬಾರಿಗೆ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದ್ದು ಬೌಲರ್ ಸ್ಯಾಮ್ಯುಯೆಲ್ ಬದ್ರಿ. 2017ರಲ್ಲಿ ನಡೆದಿದ್ದ ಪಂದ್ಯದಲ್ಲಿಯೂ ಆರ್‌ಸಿಬಿಗೆ ಎದುರಾಳಿಯಾಗಿದ್ದ ತಂಡ ಮುಂಬೈ ಇಂಡಿಯನ್ಸ್. ಮೊದಲ ಎರಡು ಹ್ಯಾಟ್ರಿಕ್ ಕೂಡ ಬೆಂಗಳೂರಿನ ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿಯೇ ನಡೆದಿತ್ತು.