ಅಹಮದಾಬಾದ್ (ಗುಜರಾತ್): ಕೆಕೆಆರ್ ಮತ್ತು ಗುಜರಾತ್ ನಡುವಿನ ಐಪಿಎಲ್ ಪಂದ್ಯ ರೋಮಾಂಚಕ ಅನುಭವ ನೀಡಿತು. ಪಂದ್ಯದ ಕೊನೆಯ ಓವರ್ನಲ್ಲಿ ಕೆಕೆಆರ್ನ ರಿಂಕು ಸಿಂಗ್ 30 ರನ್ ಬಾರಿಸಿ ಸೋಲುವ ಪಂದ್ಯ ಗೆಲ್ಲಿಸಿ ಕೊಟ್ಟರು. ಗುಜರಾತ್ ತಂಡದ ಯಶ್ ದಯಾಳ್ ಅವರ 20ನೇ ಓವರ್ನಲ್ಲಿ 5 ಸಿಕ್ಸರ್ ಬಾರಿಸಿದ ಸಿಂಗ್ ವಿಜಯೋತ್ಸವ ಆಚರಿಸಿದರು. ಗುಜರಾತ್ ನೀಡಿದ್ದ 205 ರನ್ ಗುರಿಯನ್ನು 3 ವಿಕೆಟ್ಗಳಿಂದ ಕೋಲ್ಕತ್ತಾ ಗೆದ್ದು ಬೀಗಿತು.
ಬೃಹತ್ ಗುರಿ ಬೆನ್ನತ್ತಿದ ಕೆಕೆಆರ್ಗೆ ಗುಜರಾತ್ ಟೈಟಾನ್ಸ್ ತಂಡದ ಬೌಲರ್ಗಳು ಕಾಡಿದರು. ಆರಂಭಿಕರಾಗಿ ಕಣಕ್ಕಿಳಿದ ಎನ್.ಜಗದೀಶನ್ 6 ರನ್ಗೆ ವಿಕೆಟ್ ಒಪ್ಪಿಸಿದರು. ಕಳೆದ ಪಂದ್ಯದಲ್ಲಿ ಅರ್ಧಶತಕ ಗಳಿಸಿ ಉತ್ತಮ ಆರಂಭ ನೀಡಿದ್ದ ಮತ್ತೋರ್ವ ಆರಂಭಿಕ ರಹಮಾನುಲ್ಲಾ ಗುರ್ಬಾಜ್ 15 ರನ್ಗೆ ಔಟಾದರು.
ಮೊದಲ ವಿಕೆಟ್ ಬೀಳುತ್ತಿದ್ದಂತೆ ವೆಂಕಟೇಶ್ ಅಯ್ಯರ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ತಂಡಕ್ಕೆ ತೆಗೆದುಕೊಳ್ಳಲಾಯಿತು. ಅಯ್ಯರ್ ಮತ್ತು ನಾಲ್ಕನೇ ವಿಕೆಟ್ ಆಗಿ ಬಂದ ನಾಯಕ ನಿತೀಶ್ ರಾಣಾ ಉತ್ತಮ 50 ಪ್ಲಸ್ ರನ್ ಜೊತೆಯಾಟ ನೀಡಿದರು. ಅಯ್ಯರ್ 40 ಬಾಲ್ನಲ್ಲಿ 5 ಸಿಕ್ಸರ್ ಮತ್ತು 8 ಬೌಂಡರಿಯಿಂದ 83 ರನ್ ಗಳಿಸಿ 17 ರನ್ಗಳಿಂದ ಶತಕ ವಂಚಿತರಾದರು. ನಿತೀಶ್ ರಾಣ ಜವಾಬ್ದಾರಿಯುತ ಆಟದ ಮೊರೆ ಹೋಗಿ, 29 ಬಾಲ್ ಎದುರಿಸಿ 45 ರನ್ ಪೇರಿಸಿದರು.
ರಶೀದ್ ಖಾನ್ಗೆ ಹ್ಯಾಟ್ರಿಕ್ ವಿಕೆಟ್: ವೆಂಕಟೇಶ್ ಅಯ್ಯರ್ ವಿಕೆಟ್ ಬೆನ್ನಲ್ಲೇ ಕ್ರೀಸಿಗೆ ಬಂದ ಆಂಡ್ರೆ ರಸೆಲ್(1), ಸುನಿಲ್ ನರೈನ್ (0), ಶಾರ್ದೂಲ್ ಠಾಕೂರ್ (0) ರಶೀದ್ ಖಾನ್ಗೆ ಬಲಿಯಾದರು. ರಶೀದ್ ಖಾನ್ 17ನೇ ಓವರ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದರು. ಈ ಮೂವರ ವಿಕೆಟ್ ಕಳೆದುಕೊಂಡ ಕೆಕೆಆರ್ಗೆ ಗೆಲುವಿನ ಭರವಸೆಯೇ ಬತ್ತಿಹೋಗಿತ್ತು.
3 ಓವರ್ಗೆ 52 ರನ್: ಆದರೆ ಕೊನೆಯ 3.2 ಓವರ್ನಲ್ಲಿ ಉಮೇಶ್ ಯಾದವ್ ಜೊತೆಗೆ ರಿಂಕು ಸಿಂಗ್ 52 ರನ್ ಜೊತೆಯಾಟ ಒದಗಿಸಿದರು. 17 ಓವರ್ನ ಕೊನೆಯ 3 ಎಸೆತಗಳಲ್ಲಿ ಸಿಕ್ಕಿದ್ದು ಕೇವಲ 2 ರನ್. ಶಮಿ ಎಸೆದ 18ನೇ ಓವರ್ನಲ್ಲಿ 5 ಹಾಗೂ 19ನೇ ಓವರ್ನಲ್ಲಿ 14 ರನ್ ಗಳಿಸಿದರು. 20ನೇ ಯಶ್ ದಯಾಳ್ ಓವರ್ನ ಮೊದಲ ಬಾಲ್ಗೆ ಉಮೇಶ್ ಯಾದವ್ ಒಂದು ರನ್ ತೆಗೆದು ರಿಂಕುಗೆ ಕ್ರೀಸ್ ಬಿಟ್ಟು ಕೊಟ್ಟರು. 5 ಬಾಲ್ನಲ್ಲಿ ಗೆಲುವಿಗೆ 28 ರನ್ ಅವಶ್ಯಕತೆ ಇತ್ತು. ಆದರೆ ಮಿಕ್ಕ ಐದೂ ಎಸೆತವನ್ನೂ ರಿಂಕು ಸಿಕ್ಸರ್ಗೆಟ್ಟಿದರು. ಕೆಕೆಆರ್ 3 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.
ಐಪಿಎಲ್ನಲ್ಲಿ ರಿಂಕು ಸಿಂಗ್ ಗೇಲ್, ತೆವಾಟಿಯಾ, ಜಡೇಜ ಮತ್ತು ಮಾರ್ಕಸ್ ಸ್ಟೊಯಿನಿಸ್ರಂತೆ ಓವರೊಂದರಲ್ಲಿ ಐದು ಸಿಕ್ಸ್ ಬಾರಿಸಿದ ದಾಖಲೆ ಬರೆದರು. ಯಶ್ ದಯಾಳ್ 4 ಓವರ್ ಮಾಡಿ 69 ರನ್ ಬಿಟ್ಟು ಕೊಟ್ಟು ಐಪಿಎಲ್ನ ಎರಡನೇ ಅತಿ ದುಬಾರಿ ಬೌಲರ್ ಆದರು. ಕೊನೆಯ ಓವರ್ನಲ್ಲಿ ಅತಿ ಹೆಚ್ಚು ರನ್ (29) ಚೇಸ್ ಮಾಡಿದ ತಂಡ ಎಂಬ ಖ್ಯಾತಿಗೆ ಕೆಕೆಆರ್ ಪಾತ್ರವಾಯಿತು.
ಇದಕ್ಕೂ ಮೊದಲು ಸಾಯಿ ಸುದರ್ಶನ್ (53) ಮತ್ತು ವಿಜಯ್ ಶಂಕರ್ (63) ಅವರ ಅಬ್ಬರದ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡವು ಕೆಕೆಆರ್ಗೆ 205 ರನ್ಗಳ ಬೃಹತ್ ಗುರಿ ನೀಡಿತ್ತು. ಜಿಟಿ ಪರ ವೃದ್ಧಿಮಾನ್ ಸಹ (17), ಶುಭಮನ್ ಗಿಲ್ (39) ಮತ್ತು ಅಭಿನವ್ (14) ರನ್ ಗಳಿಸಿದರು. ಇದರಿಂದಾಗಿ ತಂಡ 4 ವಿಕೆಟ್ ನಷ್ಟದಲ್ಲಿ 204 ರನ್ಗಳ ಬೃಹತ್ ಗುರಿ ನೀಡಿತ್ತು.
ಇದನ್ನೂ ಓದಿ: ಧೋನಿ ರಿವೀವ್ ಸಿಸ್ಟಮ್: ಎಂಎಸ್ಡಿ ಕರಾರುವಾಕ್ ನಿರ್ಧಾರ ಮತ್ತೆ ಸಾಬೀತು