ಚೆನ್ನೈ: ಐಪಿಎಲ್ ಟೂರ್ನಿಯ ಸೂಪರ್ ಮ್ಯಾಚ್ಗೆ ಇಂದು ಚೈನ್ನೈ ಸಾಕ್ಷಿಯಾಯಿತು. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಹಣಾಹಣಿ ರೋಚಕ ಘಟ್ಟಕ್ಕೆ ತಲುಪಿತು. ಇದರಲ್ಲಿ ಧೋನಿ ಪಡೆ ಮೊದಲ ಗೆಲುವು ದಾಖಲಿಸಿತು. ರಾಹುಲ್ ಪಡೆ ಕೊನೆಯವರೆಗೆ ಹೋರಾಡಿ ಸೋಲು ಕಂಡಿತು.
ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಂಎಸ್ ಧೋನಿ ಟೀಂ 12 ರನ್ಗಳಿಂದ ಜಯ ದಾಖಲಿಸಿದೆ. ಮೊದಲು ಬ್ಯಾಟಿಂಗ್ಗೆ ಇಳಿದ ಚೆನ್ನೈ 217 ರನ್ಗಳ ಬೃಹತ್ ಮೊತ್ತ ಪೇರಿಸಿತು. ಈ ಗುರಿ ಬೆನ್ನಟ್ಟಿದ ಎಲ್ಎಸ್ಜಿ ತಂಡ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 205 ರನ್ಗಳು ಬಾರಿಸಿ ಸೋಲೊಪ್ಪಿಕೊಂಡಿತು.
ನಾಯಕ ಕೆಎಲ್ ರಾಹುಲ್ ಜೊತೆಗೆ ಕ್ರೀಸ್ಗೆ ಬಂದ ಕೈಲ್ ಮೇಯರ್ಸ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಕೇವಲ 4 ಓವರ್ಗಳು ಆಗುವಷ್ಟರಲ್ಲಿ ಈ ಜೋಡಿ ತಂಡದ ಮೊತ್ತವನ್ನು 50 ರನ್ಗಳ ಗಡಿ ದಾಟಿಸಿತು. ಅಲ್ಲದೇ, ಮೊದಲ ವಿಕೆಟ್ಗೆ 79 ರನ್ಗಳ ಕಲೆ ಹಾಕಿತು. ಇದರಲ್ಲೂ ಕೇಲ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಬಿರುಸಿನಿಂದ ಬ್ಯಾಟ್ ಬೀಸಿದ ಕೈಲ್ ಆಕರ್ಷಕ ಅರ್ಧಶತಕ ಬಾರಿಸಿದರು. ಆದರೆ, ಇದರ ಬೆನ್ನಲ್ಲೇ ಮೊಯೀನ್ ಅಲಿ ಎಸೆತದಲ್ಲಿ ಮೇಯರ್ಸ್ ವಿಕೆಟ್ ಒಪ್ಪಿಸಿದರು. ಕೈಲ್ ಮೇಯರ್ಸ್ ಕೇವಲ 22 ಬಾಲ್ಗಳಲ್ಲಿ ಎಂಟು ಬೌಂಡರಿ ಮತ್ತು ಎರಡು ಸಿಕ್ಸರ್ಗಳ ಸಮೇತ 53 ಸಿಡಿಸಿದರು.
ನಂತರ ಬಂದ ದೀಪಕ್ ಹುಡಾ (2) ಬೇಗ ಔಟಾದರು. ಇದರ ಬೆನ್ನಲ್ಲೇ 18 ಎಸೆತಗಳಲ್ಲಿ ಎರಡು ಬೌಂಡರಿಗಳ ಸಮೇತ 20 ರನ್ ಬಾರಿಸಿದ್ದ ನಾಯಕ ರಾಹುಲ್ ಕೂಡ ವಿಕೆಟ್ ಒಪ್ಪಿಸಿದರು. ಕೃನಾಲ್ ಪಾಂಡ್ಯ (9) ಸಹ ಬೇಗ ಪೆವಿಲಿಯನ್ ಸೇರಿದರು. ಮಾರ್ಕಸ್ ಸ್ಟೋನಿಸ್ 18 ಬಾಲ್ಗಳು ಎದುರಿಸಿ 21 ರನ್ಗಳ ಕೊಡುಗೆ ನೀಡಿದರು.
ಇದರ ನಡುವೆ ವಿಕೆಟ್ ಕೀಪರ್ ನಿಕೋಲಸ್ ಪೂರನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. 18 ಎಸೆತಗಳಲ್ಲಿ ಮೂರು ಸಿಕ್ಸರ್ಗಳು ಮತ್ತು ಎರಡು ಬೌಂಡರಿಗಳೊಂದಿಗೆ 32 ಪೂರನ್ ಬಾರಿಸಿದರು. ಆಯುಷ್ ಬಡೋನಿ 23 ಮತ್ತು ಕೃಷ್ಣಪ್ಪ ಗೌತಮ್ ಅಜೇಯ 17 ರನ್ ಮತ್ತು ಮಾ್ಕ್ ವುಡ್ ಅಜೇಯ 10 ರನ್ಗಳ ಕಾಣಿಕೆ ನೀಡಿದರು. ಅದರೆ, ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಸಾಧ್ಯವಾಗಲಿಲ್ಲ. ಅಂತಿಮವಾಗಿ ಲಖನೌ 205 ರನ್ಗಳು ಗಳಿಸಲು ಮಾತ್ರ ಶಕ್ತವಾಯಿತು.
ಇದಕ್ಕೂ ಮುನ್ನ ಆರಂಭಿಕ ಆಟಗಾರರ ಶತಕದ ಜೊತೆಯಾಟ ಮತ್ತು ಅಂಬಟಿ ರಾಯುಡು ಅವರ ಅಬ್ಬರದ ಬ್ಯಾಟಿಂಗ್ನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ 7 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿತು. ಕಳೆದ ಪಂದ್ಯದಂತೆ ಮಾರ್ಕ್ ವುಡ್ ಬೌಲಿಂಗ್ ಮಾಡಿ 3 ವಿಕೆಟ್ ಪಡೆದರೆ ಹಾಗೂ ಪಿಚ್ನ ಸಹಾಯ ಪಡೆದು ರವಿ ಬಿಷ್ಣೋಯ್ ಸಹ ಮೂರು ವಿಕೆಟ್ ಕಬಳಿಸಿದರು. ಆದರೆ ರನ್ನ ವೇಗಕ್ಕೆ ಕಡಿವಾಣ ಹಾಕಲಾಗಲಿಲ್ಲ.
ಟಾಸ್ ಸೋತು ತವರು ನೆಲದಲ್ಲಿ ಬ್ಯಾಟಿಂಗ್ ಆರಂಭಿಸಿದ ಚೆನ್ನೈ ತಂಡಕ್ಕೆ ರುತುರಾಜ್ ಗಾಯಕ್ವಾಡ್ ಮತ್ತು ಡೆವೊನ್ ಕಾನ್ವೇ ಉತ್ತಮ ಜೊತೆಯಾಟ ನೀಡಿದರು. ಈ ಜೋಡಿ ಮೂರನೇ ಬಾರಿಗೆ ಶತಕದ (110) ಜೊತೆಯಾಟವನ್ನು ಸಿಎಸ್ಕೆ ಪರ ಮಾಡಿತು. ಭರವಸೆಯ ಬ್ಯಾಟರ್ ರುತುರಾಜ್ ಗಾಯಕ್ವಾಡ್ 31 ಬಾಲ್ ಎದುರಿಸಿ 4 ಸಿಕ್ಸ್ ಮತ್ತು 3 ಬೌಂಡರಿಯಿಂದ 57 ರನ್ಗಳಿಸಿದರು. ಇದು ಅವರ ಐಪಿಎಲ್ನ 12ನೇ ಅರ್ಧಶತಕವಾಗಿದೆ.
ಡೆವೊನ್ ಕಾನ್ವೇ ಗಾಯಕ್ವಾಡ್ ಜೊತೆ ಸೇರಿ ಬಿರುಸಿನ ಆರಂಭ ನೀಡಿದ್ದರಿಂದ 6 ಓವರ್ ಅಂತ್ಯಕ್ಕೆ (ಪವರ್ ಪ್ಲೇ) 79 ರನ್ ಗಳಿಸಿದರು. ಕಾನ್ವೇ 29 ಎಸೆತ ಎದುರಿಸಿ 47 ರನ್ ಗಳಿಸಿದರು. ನಂತರ ಶಿವಂ ದುಬೆ 27, ಮೊಯಿನ್ ಅಲಿ19, ಬೆನ್ ಸ್ಟೋಕ್ಸ್ 8, ರವೀಂದ್ರ ಜಡೇಜ 3 ರನ್ಗೆ ಔಟ್ ಆದರು.
5000 ರನ್ ಪೂರೈಸಿದ ಧೋನಿ: ಜಡ್ಡು ವಿಕೆಟ್ ಹೋದ ಬೆನ್ನಲ್ಲೇ ಬಂದ ಧೋನಿ ಎರಡು ಸಿಕ್ಸ್ ಹೊಡೆದು ಔಟ್ ಆದರು (12 ರನ್). ಈ ಮೂಲಕ ಐಪಿಎಲ್ನಲ್ಲಿ 5000 ರನ್ ಪೂರೈಸಿದರು. ಈ ಗಡಿ ಮುಟ್ಟಿದ 5ನೇ ಭಾರತೀಯ ಆಟಗಾರ ಎಂಬ ಖ್ಯಾತಿಗೆ ಒಳಗಾದರು.
200ರ ಗಡಿ ದಾಟಿಸಿದ ರಾಯುಡು: ಮೊದಲ ಪಂದ್ಯದ ಸೋಲಿನ ನಂತರ ಧೋನಿ ತಂಡ 20 ರನ್ ಕಡಿಮೆ ಗಳಿಸಿದ್ದು ಸೋಲಿಗೆ ಕಾರಣ ಎಂದಿದ್ದರು. ಇದೇ ಗುರಿಯನ್ನು ಇಟ್ಟು ಕ್ರೀಸ್ ಬಂದಿದ್ದ ರಾಯುಡು ಬಿರುಸಿನ ಆಟಕ್ಕೆ ಮುಂದಾದರು. 14 ಎಸೆತ ಎದುರಿಸಿ 2 ಬೌಂಡರಿ ಮತ್ತು 2 ಸಿಕ್ಸರ್ನಿಂದ 27 ರನ್ ಗಳಿಸಿದರು. 7 ವಿಕೆಟ್ ಕಳೆದುಕೊಂಡರೂ ಡೆತ್ ಓವರ್ನಲ್ಲಿ ಬಿರುಸಿನ ಆಟ ಆಡಿದ ಕಾರಣ ಚೆನ್ನೈ ತಂಡ 217 ರನ್ ಗಳಿಸಿತು. ಲಕ್ನೋ ಪರ ಮಾರ್ಕ್ ವುಡ್ ಮತ್ತು ರವಿ ಬಿಷ್ಣೋಯ್ ತಲಾ 3 ಹಾಗೂ ಆವೇಶ್ ಖಾನ್ 1 ವಿಕೆಟ್ ಪಡೆದರು.
ತಂಡಗಳು ಇಂತಿವೆ.. ಚೆನ್ನೈ ಸೂಪರ್ ಕಿಂಗ್ಸ್: ಡೆವೊನ್ ಕಾನ್ವೇ, ರುತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ಬೆನ್ ಸ್ಟೋಕ್ಸ್, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆಟ್ ಕೀಪರ್/ ನಾಯಕ), ಶಿವಂ ದುಬೆ, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹಾರ್, ಆರ್‌ಎಸ್ ಹಂಗರ್ಗೇಕರ್
ಲಕ್ನೋ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್(ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್(ವಿಕೆಟ್ ಕೀಪರ್), ಆಯುಷ್ ಬಡೋನಿ, ಮಾರ್ಕ್ ವುಡ್, ರವಿ ಬಿಷ್ಣೋಯ್, ಯಶ್ ಠಾಕೂರ್, ಅವೇಶ್ ಖಾನ್
ಇದನ್ನೂ ಓದಿ: IPL 2023: ತವರಿನಲ್ಲಿ ಮೊದಲ ಜಯದ ಹಂಬಲದಲ್ಲಿ ಧೋನಿ ಪಡೆ.. ಚೆಪಾಕ್ನಲ್ಲಿ "ಸೂಪರ್"ಗಳ ಹಣಾಹಣಿ