ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ನ 15ನೇ ಆವೃತ್ತಿಗೆ ಈಗಾಗಲೇ ಚಾಲನೆ ಸಿಕ್ಕಿದೆ. ವಿವಿಧ ತಂಡದ ಆಟಗಾರರು ಆರಂಭದಿಂದಲೇ ಹೊಡಿಬಡಿ ಆಟಕ್ಕೆ ಮುಂದಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕೂಡ ಸ್ಫೋಟಕ ಬ್ಯಾಟಿಂಗ್ ಮೊರೆ ಹೋಗಿದ್ದು, ತಾವಾಡಿರುವ ಮೊದಲ ಪಂದ್ಯದಲ್ಲೇ ಅಜೇಯ 41ರನ್ಗಳಿಕೆ ಮಾಡಿದ್ದಾರೆ.
ನಾಯಕತ್ವ ಜವಾಬ್ದಾರಿಯಿಂದ ಕೆಳಗಿಳಿದಿರುವ ವಿರಾಟ್ ಇದೀಗ ಒತ್ತಡರಹಿತವಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಸೆಷನ್ನಲ್ಲಿ ಉತ್ತಮ ರನ್ಗಳಿಕೆ ಮಾಡುವ ವಿಶ್ವಾಸವಿದೆ ಎಂದು ಕುಚಿಕ್ಕು ಗೆಳೆಯನ ಬಗ್ಗೆ ಮಾಜಿ ಕ್ರಿಕೆಟರ್ ಎಬಿಡಿ ಅಭಿಪ್ರಾಯಪಟ್ಟಿದ್ದಾರೆ. 2022ರ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ನಿಂದ 600 ಪ್ಲಸ್ ರನ್ ಹರಿದು ಬರಲಿದೆ ಎಂದಿರುವ ಅವರು, ಅತ್ಯುತ್ತಮ ಪ್ರದರ್ಶನ ನೀಡಲಿದ್ದಾರೆಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯೂಟ್ಯೂಬ್ ಚಾನೆಲ್ VUSport ಸ್ಟ್ರೀಮಿಂಗ್ನಲ್ಲಿ ಮಾತನಾಡಿರುವ 'ಮಿ.360' ಖ್ಯಾತಿಯ ಎಬಿಡಿ, ತಂಡದ ನಾಯಕನಾಗಿ ಫಪ್ ಡು ಪ್ಲೆಸಿಸ್ ಆಯ್ಕೆಯಾಗಲಿದ್ದಾರೆಂಬುದು ಎಲ್ಲರಿಗೂ ಗೊತ್ತಿತ್ತು. ಆದರೆ, ರೋಮಾಂಚನಕಾರಿ ವಿಷಯವೆಂದರೆ ವಿರಾಟ್ ಕೊಹ್ಲಿ ಇದೀಗ ಒತ್ತಡರಹಿತರಾಗಿ ಕಾಣುತ್ತಿದ್ದು, ಅತ್ಯುತ್ತಮ ಪ್ರದರ್ಶನ ನೀಡಲಿದ್ದಾರೆ ಎಂದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ತಂಡದ ಅವಿಭಾಜ್ಯ ಅಂಗವಾಗಿದ್ದ ಎಬಿ ಡಿವಿಲಿಯರ್ಸ್ ಕಳೆದ ನವೆಂಬರ್ ತಿಂಗಳಲ್ಲಿ ಎಲ್ಲ ಮಾದರಿ ಕ್ರಿಕೆಟ್ನಿಂದ ನಿವೃತ್ತಿ ಘೋಷಣೆ ಮಾಡಿದ್ದು, ಐಪಿಎಲ್ನಿಂದಲೂ ಹೊರಗುಳಿದಿದ್ದಾರೆ.
ನಿನ್ನೆಯಷ್ಟೇ ಆರ್ಸಿಬಿ ಬೋಲ್ಡ್ ಡೈರೀಸ್ನಲ್ಲಿ ಮಾತನಾಡಿದ್ದ ವಿರಾಟ್ ಕೊಹ್ಲಿ, ಮುಂಬರುವ ಋತುಗಳಲ್ಲಿ ಆರ್ಸಿಬಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮುವಲ್ಲಿ ಯಶಸ್ವಿಯಾದರೆ, ಅದರ ಶ್ರೇಯ ಎಬಿ ಡಿವಿಲಿಯರ್ಸ್ಗೂ ಸಲ್ಲುತ್ತದೆ ಎಂದಿದ್ದರು.