ಮುಂಬೈ: ಚೊಚ್ಚಲ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಲಖನೌ ಸೂಪರ್ ಜೈಂಟ್ಸ್ ಮಂಗಳವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಕಣಕ್ಕಿಳಿಯುತ್ತಿದೆ. ಎರಡೂ ತಂಡಗಳು 15ನೇ ಆವೃತ್ತಿಯಲ್ಲಿ ಸಮಬಲದ ಪ್ರದರ್ಶನ ತೋರಿವೆ. ಈ ಮೂಲಕ ಅಂಕಪಟ್ಟಿಯಲ್ಲಿ ತಲಾ 8 ಅಂಕ ಪಡೆದುಕೊಂಡು 3 ಮತ್ತು 4ನೇ ಸ್ಥಾನ ಗಿಟ್ಟಿಸಿಕೊಂಡಿವೆ.
ವಿಶೇಷವೆಂದರೆ, ಎರಡೂ ತಂಡಗಳು ತಮ್ಮ ಮೊದಲ ಪಂದ್ಯದಲ್ಲಿ ಸೋಲುಕಂಡು ನಂತರದ ಪಂದ್ಯಗಳಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿವೆ. ಮುಂದಿನ ಪಂದ್ಯಗಳಲ್ಲಿ ತಲಾ ಒಂದು ಸೋಲು, ನಂತರ ಗೆಲುವು ಕಂಡಿವೆ. ಇಂದು ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ಎರಡು ಬಲಿಷ್ಠ ತಂಡಗಳ ನಡುವೆ ಪೈಪೋಟಿ ನಡೆಯಲಿದ್ದು, ಎರಡೂ ತಂಡಗಳು ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿವೆ.
ಲಖನೌಗೆ ಹೋಲಿಸಿದರೆ ಆರ್ಸಿಬಿಯ ಅಗ್ರಕ್ರಮಾಂಕ ದುರ್ಬಲವಾಗಿದೆ. ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ನಾಯಕ ವಿರಾಟ್ ಕೊಹ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ. ಪ್ಲೆಸಿಸ್ ಮೊದಲ ಪಂದ್ಯದಲ್ಲೇ 88 ರನ್ಗಳಿಸಿ ಉತ್ತಮ ಆರಂಭ ಪಡೆದಿದ್ದರು. ಕೊಹ್ಲಿ ಕೂಡಾ ಅದೇ ಪಂದ್ಯದಲ್ಲಿ 29 ಎಸೆತಗಳಲ್ಲಿ 41 ರನ್ಗಳಿಸಿ ಅಜೇಯರಾಗುಳಿದಿದ್ದರು. ಆದರೆ ನಂತರದ 5 ಪಂದ್ಯಗಳಲ್ಲಿ ಪ್ಲೆಸಿಸ್ 66 ರನ್ಗಳಿಸಿದರೆ, ಕೊಹ್ಲಿ ಕ್ರಮವಾಗಿ 12, 5, 48,1 ಮತ್ತು 12 ರನ್ಗಳಿಸಿದ್ದಾರೆ.
ತಂಡದ ಪಾಸಿಟಿವ್ ಅಂಶವೆಂದರೆ, ಮ್ಯಾಕ್ಸ್‌ವೆಲ್, ಶಹಬಾಜ್ ಮತ್ತು ದಿನೇಶ್ ಕಾರ್ತಿಕ್ ಅತ್ಯುತ್ತಮ ಪ್ರದರ್ಶನ ತೋರಿ ಅಗ್ರಕ್ರಮಾಂಕದ ವೈಫಲ್ಯವನ್ನು ಮರೆ ಮಾಡುತ್ತಿದ್ದಾರೆ. ಆದರೂ ಇವರನ್ನೇ ಹೆಚ್ಚು ಅವಲಂಬಿತರಾಗದೆ ಸೀನಿಯರ್ ಆಟಗಾರರಾಗಿರುವ ಕೊಹ್ಲಿ-ಪ್ಲೆಸಿಸ್ ತಮ್ಮ ಅನುಭವಕ್ಕೆ ತಕ್ಕಂತೆ ಆಡಬೇಕಿದೆ.
ಬೌಲಿಂಗ್ ವಿಭಾಗ ಕೂಡ ಅಸ್ಥಿರವಾಗಿದೆ. ಹರ್ಷಲ್ ಪಟೇಲ್ ಸ್ಥಿರ ಪ್ರದರ್ಶನ ತೋರುತ್ತಿದ್ದು, ಸಿರಾಜ್ ಒಂದು ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದರೆ ಮತ್ತೊಂದು ಪಂದ್ಯದಲ್ಲಿ 40-50 ರನ್ ಬಿಟ್ಟುಕೊಡುತ್ತಿದ್ದಾರೆ. ಸ್ಪಿನ್ನರ್ ಹಸರಂಗ ಕೂಡ ವಿಕೆಟ್ ಪಡೆಯುತ್ತಿದ್ದರೂ ರನ್ ನಿಯಂತ್ರಿಸುವಲ್ಲಿ ಗಮನ ನೀಡಬೇಕಾಗಿದೆ. ಒಂದೆರಡು ಪಂದ್ಯಗಳನ್ನಾಡಿರುವ ಹೇಜಲ್ವುಡ್ ಕಳೆದ ಪ್ರದರ್ಶನವನ್ನು ಕಾಯ್ದುಕೊಳ್ಳುವ ಅಗತ್ಯವಿದೆ.
ಎಲ್ಎಸ್ಜಿ ತಂಡವನ್ನು ಕೆ.ಎಲ್.ರಾಹುಲ್ ಮುಂದೆ ನಿಂತು ನಡೆಸುತ್ತಿರುವುದು ಮ್ಯಾನೇಜ್ಮೆಂಟ್ಗೆ ಖುಷಿ ತಂದಿದೆ. ಒಂದೆರಡು ವೈಫಲ್ಯ ಅನುಭವಿಸಿದ್ದ ಅವರು ಕಳೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದರು. ಇವರಿಗೆ ದಕ್ಷಿಣ ಆಫ್ರಿಕಾದ ಡಿಕಾಕ್ ಸೂಕ್ತ ಬೆಂಬಲ ನೀಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಮನೀಶ್ ಪಾಂಡೆ ಒಂದಷ್ಟು ಉಪಯುಕ್ತ ರನ್ಗಳಿಸಿದ್ದು ಮಧ್ಯಮ ಕ್ರಮಾಂಕಕ್ಕೆ ಬಲ ಬಂದಂತಾಗಿದೆ.
ಮಾರ್ಕಸ್ ಸ್ಟೋಯಿನಿಸ್ ಆಗಮನ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಅವರು ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲೂ ನೆರವಾಗುತ್ತಿದ್ದಾರೆ. ಇದೇ ವೇಳೆ, ಬೌಲಿಂಗ್ ಬಳಗ ಕೂಡ ಅತ್ಯುತ್ತಮವಾಗಿದೆ. ಚಮೀರಾ, ಜೇಸನ್ ಹೋಲ್ಡರ್, ಆವೇಶ್ ಖಾನ್, ಕೃನಾಲ್ ಪಾಂಡ್ಯ ಮತ್ತು ರವಿ ಬಿಷ್ಣೋಯ್ ಸ್ಥಿರ ಪ್ರದರ್ಶನ ತೋರುತ್ತಿರುವುದರಿಂದ ಎರಡೂ ತಂಡಗಳಿಂದ ಸಮಬಲದ ಪೈಪೋಟಿ ನಿರೀಕ್ಷಿಸಬಹುದು.
ಸಂಭಾವ್ಯ ಆರ್ಸಿಬಿ XI: ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೀ), ಸುಯಶ್ ಪ್ರಭುದೇಸಾಯಿ, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್
ಸಂಭಾವ್ಯ ಎಲ್ಎಸ್ಜಿ XI: ಕೆ.ಎಲ್.ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೀ), ಮನೀಶ್ ಪಾಂಡೆ, ದೀಪಕ್ ಹೂಡಾ, ಮಾರ್ಕಸ್ ಸ್ಟೋನಿಸ್, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ದುಷ್ಮಂತ ಚಮೀರಾ, ಅವೇಶ್ ಖಾನ್, ರವಿ ಬಿಷ್ಣೋಯ್
ಇದನ್ನೂ ಓದಿ:ಡೆಲ್ಲಿ ಕ್ಯಾಪಿಟಲ್ಸ್ vs ಪಂಜಾಬ್ ಕಿಂಗ್ಸ್ ಪಂದ್ಯ ಮುಂಬೈಗೆ ಸ್ಥಳಾಂತರ