ಕೊಚ್ಚಿ (ಕೇರಳ): 2023ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಿನಿ ಹರಾಜಿನಲ್ಲಿ ವಿದೇಶಿ ಆಟಗಾರರು ಭಾರಿ ಬೆಲೆಗೆ ಬಿಕರಿಯಾಗಿ ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದ್ದಾರೆ. ಇದರ ನಡುವೆ ಭಾರತದ ಮಯಾಂಕ್ ಅಗರ್ವಾಲ್ 8.4 ಕೋಟಿ ರೂ.ಗೆ ಸನ್ ರೈಸರ್ಸ್ ಹೈದರಾಬಾದ್ ತಂಡ ಸೇರಿಕೊಂಡಿದ್ದಾರೆ. ಮಯಾಂಕ್ ನಾಯಕತ್ವದ ಗುಣಗಳನ್ನು ಹೊಂದಿದ್ದಾರೆ ಎಂದು ತಂಡದ ಕೋಚ್, ದಿಗ್ಗಜ ಆಟಗಾರ ಬ್ರಿಯಾನ್ ಲಾರಾ ಹೇಳಿದ್ದಾರೆ.
2016ರ ಐಪಿಎಲ್ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ ತಂಡ ಮಯಾಂಕ್ ಅಗರ್ವಾಲ್ ಅವರನ್ನು ದುಬಾರಿ ಮೊತ್ತಕ್ಕೆ ಖರೀದಿಸಿದ್ದು ಅಚ್ಚರಿಗೂ ಕಾರಣವಾಗಿದೆ. 2022ರಲ್ಲಿ ಮಯಾಂಕ್ ಅವರು ಪಂಜಾಬ್ ಕಿಂಗ್ಸ್ ತಂಡದ ನೇತೃತ್ವ ವಹಿಸಿದ್ದರು. ಈ ಟೂರ್ನಿಯಲ್ಲಿ ಖುದ್ದು ತಂಡದ ನಾಯಕರಾಗಿದ್ದ ಇವರು, 13 ಪಂದ್ಯಗಳಲ್ಲಿ 16.33 ಸರಾಸರಿಯೊಂದಿಗೆ ಕೇವಲ 196 ರನ್ ಗಳಿಸಿದ್ದರು. ಅಲ್ಲದೇ, ಪಂಜಾಬ್ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದೊಂದಿಗೆ ಆ ಆವೃತ್ತಿ ಕೊನೆಗೊಳಿಸಿತ್ತು.
ಇದನ್ನೂ ಓದಿ: ₹18.5 ಕೋಟಿ! ಐಪಿಎಲ್ ಟೂರ್ನಿ ಇತಿಹಾಸದಲ್ಲೇ ಅತಿ ದುಬಾರಿ ಆಟಗಾರ ಸ್ಯಾಮ್ ಕರ್ರಾನ್!
ಕಳೆದ ನವೆಂಬರ್‌ನಲ್ಲಿ ಶಿಖರ್ ಧವನ್ ಅವರನ್ನು ಪಂಜಾಬ್ ಕಿಂಗ್ಸ್ ತಂಡವು ತನ್ನ ಹೊಸ ನಾಯಕನನ್ನಾಗಿ ಎಂದು ಘೋಷಿಸಿತ್ತು. ನಂತರ ಅಗರ್ವಾಲ್ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿತ್ತು. ಇಂದು ನಡೆದ ಮಿನಿ ಹರಾಜಿನಲ್ಲಿ ಹೈದರಾಬಾದ್ ತಂಡ 8.4 ಕೋಟಿ ರೂ. ಕೊಟ್ಟು ಮಯಾಂಕ್ ಅವರನ್ನು ಖರೀದಿಸಿತು. ಈ ಮೂಲಕ ಪ್ರಸ್ತುತ ಹರಾಜು ಪ್ರಕ್ರಿಯೆಯಲ್ಲಿ ತಾಯ್ನಾಡಿನ ಟೂರ್ನಿಯಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮಯಾಂಕ್ ಅವರನ್ನು ದುಬಾರಿ ಬೆಲೆಗೆ ಖರೀದಿಸಿದ ನಂತರ ಹೈದರಾಬಾದ್ ತಂಡದ ಕೋಚ್ ಲಾರಾ, ಕಳೆದ ಬಾರಿ ಐಪಿಎಲ್ನಲ್ಲಿ ಮಯಾಂಕ್ ವೈಫಲ್ಯದ ಬಗ್ಗೆ ಪ್ರತಿಕ್ರಿಯಿಸಿ, ಮಯಾಂಕ್ ನಾಯಕತ್ವದ ಗುಣಗಳನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೆರಿಬಿಯನ್ ಕ್ರಿಕೆಟಿಗನಿಗೆ 16 ಕೋಟಿ ರೂ! ಕೆ.ಎಲ್ ರಾಹುಲ್ ತಂಡದಲ್ಲಿ ಪೂರನ್ ಆಟ
ನಾವು ಈಗಾಗಲೇ ತಂಡದಲ್ಲಿ ಒಂದೆರಡು ಹಿರಿಯ ಆಟಗಾರರನ್ನು ಹೊಂದಿದ್ದೇವೆ. ತಮ್ಮ ತಂಡದ ಉಳಿದ ಆಟಗಾರರಲ್ಲೂ ನಾಯಕತ್ವದ ಗುಣವಿದೆ. ಆದರೆ, ನಾಯಕತ್ವದ ಬಗ್ಗೆ ಇನ್ನೂ ನಾವು ನಿರ್ಧಾರ ತೆಗೆದುಕೊಂಡಿಲ್ಲ ಎಂದು ಕೊಚ್ಚಿಯಲ್ಲಿ ನಡೆಯುತ್ತಿರುವ ಹರಾಜಿನ ಮೊದಲ ವಿರಾಮದ ಸಂದರ್ಭದಲ್ಲಿ ಲಾರಾ ಹೇಳಿದರು.
ಟಾಪ್ 10 ದುಬಾರಿ ಆಟಗಾರರು ಇವರು:
ಮಿನಿ ಹರಾಜಿನಲ್ಲಿ 5 ಕೋಟಿ ರೂ.ಗೆ ಮೇಲ್ಪಟ್ಟು ಹರಾಜುಗೊಂಡ ಹತ್ತು ದುಬಾರಿ ಆಟಗಾರರಿದ್ದಾರೆ. ಅದರಲ್ಲೂ, 12 ಕೋಟಿ ರೂ.ಯಿಂದ 20 ಕೋಟಿ ರೂ ಅಂತರದಲ್ಲಿ ಐವರು ವಿದೇಶಿ ಆಟಗಾರರು ಬಿಕರಿಯಾಗಿದ್ದಾರೆ. ಸ್ವದೇಶಿ ಆಟಗಾರರಲ್ಲಿ ಮಯಾಂಕ್ ಅಗರ್ವಾಲ್ 8.4 ಕೋಟಿ, ಬೌಲರ್ಗಳಾದ ಶಿವಂ ಮಾವಿ 6 ಕೋಟಿ, ಮುಖೇಶ್ ಕುಮಾರ್ 5.50 ಕೋಟಿ ದುಬಾರಿ ಬೆಲೆಗೆ ಮಾರಾಟವಾಗಿದ್ದಾರೆ. ಇನ್ನುಳಿದಂತೆ,
- ಇಂಗ್ಲೆಂಡ್ನ ಸ್ಯಾಮ್ ಕರ್ರಾನ್ ದಾಖಲೆಯ 18.50 ಕೋಟಿಗೆ ಪಂಜಾಬ್ ಕಿಂಗ್ಸ್ ತಂಡದ ಪಾಲಾದರು.
- ಆಸ್ಟ್ರೇಲಿಯಾದ ಕ್ಯಾಮರಾನ್ ಗ್ರೀನ್ ಅವರನ್ನು 17.5 ಕೋಟಿ ರೂ ಕೊಟ್ಟು ಮುಂಬೈ ಇಂಡಿಯನ್ಸ್ ತಂಡ ಖರೀದಿಸಿದೆ.
- ಇಂಗ್ಲೆಂಡ್ನ ಬೆನ್ ಸ್ಟೋಕ್ಸ್ 16.25 ಕೋಟಿ ರೂಪಾಯಿಗೆ ಚೆನ್ನೈ ತಂಡವನ್ನು ಸೇರಿಕೊಂಡಿದ್ದಾರೆ.
- ವೆಸ್ಟ್ ಇಂಡೀಸ್ನ ನಿಕೋಲಸ್ ಪೂರನ್ 16 ಕೋಟಿಗೆ ಲಖನೌ ಸೂಪರ್ ಜೈಂಟ್ಸ್ ತಂಡದ ಪಾಲಾಗಿದ್ದಾರೆ.
- ಮತ್ತೊಬ್ಬ ಇಂಗ್ಲೆಂಗ್ ಆಟಗಾರ ಹ್ಯಾರಿ ಬ್ರೂಕ್ 13.25 ಕೋಟಿಗೆ ಹೈದರಾಬಾದ್ ತಂಡ ಸೇರಿದ್ದಾರೆ.
- ಹೈದರಾಬಾದ್ ತಂಡ ಮಯಾಂಕ್ ಅಗರ್ವಾಲ್ ಅವರನ್ನು 8.4 ಕೋಟಿಗೆ ಖರೀದಿ ಮಾಡಿದೆ.
- ಭಾರತದ ಯುವ ಕ್ರಿಕೆಟಿಗ ಶಿವಂ ಮಾವಿ 6 ಕೋಟಿಗೆ ಗುಜರಾತ್ ಟೈಟಾನ್ಸ್ ತಂಡವನ್ನು ಸೇರಿಕೊಂಡಿದ್ದಾರೆ.
- ವೆಸ್ಟ್ ಇಂಡೀಸ್ನ ಜೇಸನ್ ಹೋಲ್ಡರ್ ರಾಜಸ್ಥಾನ ರಾಯಲ್ಸ್ 5.75 ಕೋಟಿ ಕೊಟ್ಟು ಖರೀದಿ ಮಾಡಿದೆ.
- ಭಾರತದ ಮತ್ತೊಬ್ಬ ಕ್ರಿಕೆಟಿಗ ಮುಖೇಶ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 5.50 ಕೋಟಿ ಬಿಡ್ ಮಾಡಿ ಖರೀದಿಸಿದೆ.
- ದಕ್ಷಿಣ ಆಫ್ರಿಕಾದ ಹೆನ್ರಿಕ್ ಕ್ಲಾಸೆನ್ 5.25 ಕೋಟಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಿದ್ದಾರೆ.
ಇದನ್ನೂ ಓದಿ: ₹2.4 ಕೋಟಿಗೆ ಡೆಲ್ಲಿ ಪಾಲಾದ ಮನೀಶ್ ಪಾಂಡೆ; ಮಿನಿ ಹರಾಜಿನಲ್ಲಿ ಆರ್ಸಿಬಿಗೆ ಯಾರೆಲ್ಲಾ?