ಪುಣೆ: ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ರಾಜಸ್ಥಾನ-ಹೈದರಾಬಾದ್ ತಂಡ ಮುಖಾಮುಖಿಯಾಗಿವೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ಆರಂಭದಿಂದಲೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 210 ರನ್ಗಳಿಕೆ ಮಾಡಿ, ಎದುರಾಳಿ ತಂಡಕ್ಕೆ 211ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ.
ರಾಜಸ್ಥಾನ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಜೋಶ್ ಬಟ್ಲರ್ ಹಾಗೂ ಜೈಸ್ವಾಲ್ ಉತ್ತಮ ಆರಂಭ ಒದಗಿಸಿದರು. ಭುವನೇಶ್ವರ್ ಕುಮಾರ್ ಎಸೆದ ಮೊದಲ ಓವರ್ನಲ್ಲೇ ಬಟ್ಲರ್ ವಿಕೆಟ್ ಒಪ್ಪಿಸಿದ್ರೂ, ನೋ ಬಾಲ್ ಆದ ಕಾರಣ ಜೀವದಾನ ಪಡೆದುಕೊಂಡರು. ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಂಡ ಬ್ಯಾಟರ್ ತಾವು ಎದುರಿಸಿದ 28 ಎಸೆತಗಳಲ್ಲಿ 3 ಸಿಕ್ಸರ್, 3 ಬೌಂಡರಿ ಸೇರಿದಂತೆ 35ರನ್ಗಳಿಕೆ ಮಾಡಿದರು. ಇವರಿಗೆ ಸಾಥ್ ನೀಡಿದ ಜೈಸ್ವಾಲ್ 20ರನ್ಗಳಿಕೆ ಮಾಡಿ ಅರ್ಧಶತಕದ ಜೊತೆಯಾಟವಾಡಿದರು.
ಶೆಫಾರ್ಡ್ ಎಸೆದ ಓವರ್ನಲ್ಲಿ ಜೈಸ್ವಾಲ್(20) ವಿಕೆಟ್ ಒಪ್ಪಿಸಿದರೆ, ಉಮ್ರಾನ್ ಮಲ್ಲಿಕ್ ಓವರ್ನಲ್ಲಿ (35) ಬಟ್ಲರ್ ಔಟಾದರು. ಇದಾದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಒಂದಾದ ಕ್ಯಾಪ್ಟನ್ ಸ್ಯಾಮ್ಸನ್ ಹಾಗೂ ಕನ್ನಡಿಗ ಪಡಿಕ್ಕಲ್ ಎದುರಾಳಿ ತಂಡದ ಬೌಲರ್ಗಳನ್ನ ಬೆಂಡೆತ್ತಿದರು. ಈ ಜೋಡಿ ಮೇಲಿಂದ ಮೇಲೆ ಬೌಂಡರಿ ಸಿಕ್ಸರ್ ಸುರಿಮಳೆಗೈದು ರನ್ಗತಿ ಮತ್ತಷ್ಟು ಏರಿಸಿದರು. ಕ್ಯಾಪ್ಟನ್ ಸ್ಯಾಮ್ಸನ್ ತಾವು ಎದುರಿಸಿದ 27 ಎಸೆತಗಳಲ್ಲಿ 5 ಸಿಕ್ಸರ್, 3 ಬೌಂಡರಿ ಸೇರಿದಂತೆ 55ರನ್ಗಳಿಕೆ ಮಾಡಿದರೆ, ಪಡಿಕ್ಕಲ್ 29 ಎಸೆತಗಳಲ್ಲಿ 2 ಸಿಕ್ಸರ್, 4 ಬೌಂಡರಿ ಸೇರಿದಂತೆ 41ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು.
ಹೆಟ್ಮಾಯರ್ ಅಬ್ಬರ: ಕೊನೆ ಕ್ಷಣದಲ್ಲಿ ಬ್ಯಾಟಿಂಗ್ ಮಾಡಲು ಕಣಕ್ಕಿಳಿಸಿದ ಶಿಮ್ರಾನ್ ಹೆಟ್ಮಾಯರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಮೊತ್ತ 200ರ ಗಡಿ ದಾಟುವಂತೆ ಮಾಡಿದರು. ತಾವು ಎದುರಿಸಿದ ಕೇವಲ 13 ಎಸೆತಗಳಲ್ಲಿ 3 ಸಿಕ್ಸರ್, 2 ಬೌಂಡರಿ ಸೇರಿ 32ರನ್ಗಳಿಕೆ ಮಾಡಿದರು. ಇವರಿಗೆ ರಿಯಾನ್ ಪರಾಗ್(12) ಉತ್ತಮ ಸಾಥ್ ನೀಡಿದರು. ತಂಡ 20 ಓವರ್ಗಳಲ್ಲಿ 6 ವಿಕೆಟ್ನಷ್ಟಕ್ಕೆ 210ರನ್ಗಳಿಕೆ ಮಾಡಿದ್ದು, ಎದುರಾಳಿಗೆ 211ರನ್ ಕಠಿಣ ಗುರಿ ನೀಡಿದೆ.
ಹೈದರಾಬಾದ್ ತಂಡದ ಪರ ಉಮ್ರಾನ್ ಮಲ್ಲಿಕ್, ನಟರಾಜನ್ ತಲಾ 2 ವಿಕೆಟ್ ಪಡೆದುಕೊಂಡರೆ, ಭುವನೇಶ್ವರ್ ಕುಮಾರ್ ಹಾಗೂ ಶಿಫಾರ್ಡ್ 1 ವಿಕೆಟ್ ಕಿತ್ತರು.