ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ ಮುಂದಿನ ಆವೃತ್ತಿಗಾಗಿ ಎರಡು ಹೊಸ ತಂಡಗಳು ಸೇರ್ಪಡೆಯಾಗಲಿದ್ದು, ಅವುಗಳ ಹೆಸರು ಇಂದು ಘೋಷಣೆಯಾಗಲಿದೆ.
ಭಾರತೀಯ ಕ್ರಿಕೆಟ್ ಮಂಡಳಿಯಿಂದ ಹೊಸ ತಂಡಗಳ ಹೆಸರು ಅನಾವರಣಗೊಳ್ಳಲಿದ್ದು, ಎರಡು ಫ್ರಾಂಚೈಸಿ ಪಡೆಯಲು ದೇಶದ ಘಟಾನುಘಟಿ ಸಂಸ್ಥೆಗಳು ತೀವ್ರ ಪೈಪೋಟಿ ನಡೆಸುತ್ತಿವೆ ಎಂದು ತಿಳಿದು ಬಂದಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಅಹಮದಾಬಾದ್, ಲಖನೌ ಹೊಸ ಫ್ರಾಂಚೈಸಿಗಳು ಎಂದು ಹೇಳಲಾಗಿದೆ.
ಫ್ರಾಂಚೈಸಿ ಖರೀದಿಗೆ ಭಾರೀ ಸ್ಪರ್ಧೆ ಏರ್ಪಟ್ಟಿರುವ ಕಾರಣ ಪ್ರತಿ ತಂಡ 7000 ಕೋಟಿ ರೂ.ನಿಂದ 100000 ಕೋಟಿ ರೂ.ವರೆಗೆ ಮಾರಾಟವಾಗಬಹುದು ಎಂದು ಅಂದಾಜಿಸಲಾಗಿದೆ. 22 ಸಂಸ್ಥೆಗಳು 10 ಲಕ್ಷ ರೂ. ಪಾವತಿ ಮಾಡಿ ಟೆಂಡರ್ ಪ್ರತಿ ಖರೀದಿ ಮಾಡಿವೆ.
ಅಹಮದಾಬಾದ್ ಫ್ರಾಂಚೈಸಿ ಖರೀದಿಸಲು ಭಾರತದ ಬಹುರಾಷ್ಟ್ರೀಯ ಕಂಪನಿ ಅದಾನಿ ಗ್ರೂಪ್ ಮುಂದಾಗಿದೆ ಎಂದು ತಿಳಿದು ಬಂದಿದೆ. ವಿಶ್ವವಿಖ್ಯಾತ ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಸೇರಿದಂತೆ ಹಲವಾರು ಕ್ರೀಡಾ ತಂಡಗಳ ಮಾಲೀಕರಾಗಿರುವ ಗ್ಲೇಜರ್ ಫ್ಯಾಮಿಲಿ ಐಪಿಎಲ್ ತಂಡವನ್ನು ಖರೀದಿಸಲು ಆಸಕ್ತಿ ತೋರಿದೆ. ಅದಕ್ಕಾಗಿ ಬಿಸಿಸಿಐನಿಂದ ಬಿಡ್ ಇನ್ವಿಟೇಶನ್ ಟು ಟೆಂಡರ್ (ಐಟಿಟಿ) ದಾಖಲೆಯನ್ನು ಅಕ್ಟೋಬರ್ 20ರಂದು ಖರೀದಿಸಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಗುರುವಾರ ಪಿಟಿಐಗೆ ತಿಳಿಸಿದ್ದಾರೆ.
ಇದನ್ನೂ ಓದಿರಿ: ರೋಹಿತ್ ಅವರನ್ನ ಕೈಬಿಡುತ್ತೀರಾ? ಪಾಕ್ ಪತ್ರಕರ್ತನ ಪ್ರಶ್ನೆಗೆ ಈ ರೀತಿ ತಿರುಗೇಟು ನೀಡಿದ ಕೊಹ್ಲಿ!
3,000 ಕೋಟಿಗಿಂತ ಹೆಚ್ಚಿನ ಆದಾಯ ಇರುವ ಕಂಪನಿಗಳಿಗೆ ಮಾತ್ರ ಬಿಡ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಬಿಸಿಸಿಐ ಅವಕಾಶ ನೀಡಿದೆ. ಒಟಿಟಿ ಡಾಕ್ಯುಮೆಂಟ್ ಅನ್ನು ತೆಗೆದುಕೊಳ್ಳುವುದು ಯುಎಸ್ ಮೂಲದ ಗ್ಲೇಜರ್ ಕುಟುಂಬವು ಫ್ರಾಂಚೈಸಿಗಾಗಿ ಔಪಚಾರಿಕ ಬಿಡ್ ಮಾಡುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿಯಿಲ್ಲವಾದರೂ, ಬಿಸಿಸಿಐ ನಿಯಮದ ಪ್ರಕಾರ ಐಪಿಎಲ್ ಬಿಡ್‌ನಲ್ಲಿ ಭಾಗವಹಿಸುವುದಾದರೆ ಭಾರತದಲ್ಲಿ ತನ್ನ ಕಂಪನಿಯನ್ನು ಸ್ಥಾಪಿಸಬೇಕಾಗುತ್ತದೆ. ಒಟಿಟಿ ದಾಖಲಾತಿಯು ವಿದೇಶಿ ಸಂಸ್ಥೆಯ ಬಿಡ್ ಯಶಸ್ವಿಯಾಗಬೇಕಾದರೆ ಭಾರತದಲ್ಲಿ ಕಂಪನಿಯನ್ನು ಸ್ಥಾಪಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸುತ್ತದೆ.
ಈಗಾಗಲೇ ಐಪಿಎಲ್ ತಂಡಗಳ ಖರೀದಿಗಾಗಿ ಅದಾನಿ ಗ್ರೂಪ್, ಟೊರೆಂಟೋ ಫಾರ್ಮಾ, ಅರೊಬಿಂದೋ ಫಾರ್ಮಾ, ಆರ್‌ಪಿಜಿ ಸಂಜೀವ್ ಗೋಯೆಂಕಾ ಗ್ರೂಪ್, ಹಿಂದೂಸ್ತಾನ್ ಟೈಮ್ಸ್ ಮೀಡಿಯಾ, ಜಿಂದಾಲ್ ಸ್ಟೀಲ್, ಉದ್ಯಮಿ ರೋನಿ ಸ್ಕ್ರೂವಾಲಾ ಸೇರಿದಂತೆ ಹಲವು ಕಂಪನಿಗಳು ಬಿಡ್ ದಾಖಲಾತಿಯನ್ನು ಖರೀದಿಸಿವೆ ಎಂದು ತಿಳಿದು ಬಂದಿದೆ.
ಐಪಿಎಲ್‌ನ ಎರಡು ಹೊಸ ತಂಡಗಳ ಹರಾಜು ಪ್ರಕ್ರಿಯೆ ಅಕ್ಟೋಬರ್ 25 ರಂದು ನಡೆಯುವ ಸಾಧ್ಯತೆ ಇದೆ. ಮುಂದಿನ ವರ್ಷದಿಂದ ಐಪಿಎಲ್ ಟೂರ್ನಿಯಲ್ಲಿ 10 ತಂಡಗಳು ಕಾದಾಟ ನಡೆಸಲಿವೆ.
ಗಂಭೀರ್ ಪಾಲುದಾರ?
ಲಭ್ಯವಾಗಿರುವ ಮಾಹಿತಿ ಪ್ರಕಾರ ಟೀಂ ಇಂಡಿಯಾ ಮಾಜಿ ಆಟಗಾರ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್,ತಂಡವೊಂದರ ಪಾಲುದಾರನಾಗಲು ಆಸಕ್ತಿ ತೋರಿದ್ದಾರೆ ಎಂದು ತಿಳಿದು ಬಂದಿದೆ. ಸುಮಾರು 300 ಕೋಟಿ ರೂ. ಹೂಡಿಕೆ ಮಾಡಲು ಅವರು ಸಿದ್ಧರಾಗಿದ್ದಾರೆ ಎಂಬ ಮಾಹಿತಿ ಮಾಧ್ಯಮಗಳಲ್ಲಿ ವರದಿಯಾಗಿದೆ.