ಪುಣೆ(ಮಹಾರಾಷ್ಟ್ರ): ಸತತ ಸೋಲುಗಳನ್ನು ಕಾಣುತ್ತಿರುವ ಮುಂಬೈ ಇಂಡಿಯನ್ಸ್ ಮತ್ತೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡಿದೆ. ಆದರೆ ಈಗ ಸೋಲಿನ ಜೊತೆಗೆ ದಂಡವನ್ನೂ ಪಾವತಿಸಬೇಕಾದ ಅನಿವಾರ್ಯತೆಗೆ ಮುಂಬೈ ತಂಡಕ್ಕೆ ಎದುರಾಗಿದೆ. ಹೌದು, ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ದಂಡ ವಿಧಿಸಲಾಗಿದೆ.
ನಿಧಾನಗತಿಯ ಓವರ್ ಕಾರಣಕ್ಕೆ ಮುಂಬೈ ತಂಡದ ನಾಯಕ ಸೇರಿದಂತೆ ಎಲ್ಲಾ ಆಟಗಾರರಿಗೆ ದಂಡವನ್ನು ವಿಧಿಸಲಾಗಿದ್ದು ನಾಯಕ ರೋಹಿತ್ ಶರ್ಮಾಗೆ 24 ಲಕ್ಷ ರೂಪಾಯಿ ದಂಡ ಮತ್ತು ಉಳಿದ ಆಟಗಾರರಿಗೆ 6 ಲಕ್ಷ ರೂಪಾಯಿ ಅಥವಾ ಪಂದ್ಯಕ್ಕೆ ನೀಡುವ ಸಂಭಾವನೆಯ ಶೇಕಡಾ 25ರಷ್ಟರಲ್ಲಿ ಯಾವುದು ಕಡಿಮೆಯೋ ಅಷ್ಟು ದಂಡವನ್ನು ವಿಧಿಸಲಾಗಿದೆ.
ಈ ಸೀಸನ್ನಲ್ಲಿ ಮುಂಬೈ ತಂಡ ಎರಡನೇ ಬಾರಿಗೆ ಈ ರೀತಿಯ ದಂಡಕ್ಕೆ ಒಳಗಾಗಿದೆ. ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡ ಇನ್ನೂ ಒಂದೂ ಪಂದ್ಯವನ್ನು ಗೆಲ್ಲದೇ ಇರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಮಯಾಂಕ್ ಅಗರ್ವಾಲ್ ಮತ್ತು ಶಿಖರ್ ಧವನ್ ಅವರ ಅಬ್ಬರದ ಅರ್ಧಶತಕಗಳ ನೆರವಿನಿಂದ 198 ರನ್ ಗಳಿಸಿದ್ದ ಪಂಜಾಬ್ ಕಿಂಗ್ಸ್ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 12 ರನ್ಗಳ ಅಂತರದಿಂದ ಸೋಲನುಭವಿಸಿದೆ. ರೋಹಿತ್ ಶರ್ಮಾ ನೇತೃತ್ವದ ತಂಡವು ಶನಿವಾರ ಲಖನೌ ಸೂಪರ್ ಜೈಂಟ್ಸ್ ಅನ್ನು ಎದುರಿಸುತ್ತಿದ್ದು, ಗೆಲುವನ್ನು ನಿರೀಕ್ಷಿಸುತ್ತಿದೆ.
ಇದನ್ನೂ ಓದಿ: ಮಯಾಂಕ್ ಮುಂದೆ ಮಂಕಾದ ಮುಂಬೈ.. ‘ಶಿಖರ’ದೆತ್ತರ ಗುರಿ ಮುಟ್ಟದೇ ಸತತ 5ನೇ ಸೋಲು ಕಂಡ ರೋಹಿತ್ ಬಳಗ