ನವದೆಹಲಿ: ಇದೇ 26 ರಂದು ಐಪಿಎಲ್ ಹಬ್ಬ ಆರಂಭವಾಗಲಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಚನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆರಂಭಿಕ ಬ್ಯಾಟರ್ ಮೊಯಿನ್ ಅಲಿ ಆಡೋದು ಅನುಮಾನವಾಗಿದೆ. 8 ಕೋಟಿ ರೂಪಾಯಿ ಕೊಟ್ಟು ಸಿಎಸ್‌ಕೆ 34 ವರ್ಷದ ಮೊಯಿನ್ ಅಲಿ ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆ. 15ನೇ ಆವೃತ್ತಿಗೆ ನಾಲ್ಕು ಬಾರಿ ಚಾಂಪಿಯನ್ ಭರ್ಜರಿ ಅಭ್ಯಾಸ ಆರಂಭಿಸಿದ್ದು, ಆಲ್‌ರೌಂಡರ್ ಮೊಯಿಲ್ ಅಲಿ ಇನ್ನೂ ತಂಡವನ್ನು ಕೂಡಿಕೊಂಡಿಲ್ಲ.
ಭಾರತಕ್ಕೆ ಪ್ರಯಾಣಿಸಲು ಮೊಯಿನ್‌ಗೆ ಅಗತ್ಯವಾದ ವೀಸಾವನ್ನು ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಅವರು ಯುಕೆಯಲ್ಲಿ ಸಿಲುಕಿಕೊಂಡಿದ್ದಾರೆ. 2021ರ ರನ್ನರ್ ಅಪ್ ನೈಟ್ ರೈಡರ್ಸ್ ವಿರುದ್ಧ ತನ್ನ ತಂಡದ ಮೊದಲ ಪಂದ್ಯವನ್ನು ಆಡುವ ಅವಕಾಶವನ್ನು ಪಡೆಯಲು ಮೊಯಿನ್ ಬುಧವಾರದೊಳಗೆ ಮುಂಬೈಗೆ ಆಗಮಿಸಬೇಕಾಗಿದೆ ಎಂದು ಕ್ರೀಡಾ ವರದಿಗಳು ತಿಳಿಸಿವೆ. ಭಾರತಕ್ಕೆ ಆಗಮಿಸಿದ ನಂತರ, ಐಪಿಎಲ್ ಬಯೋ ಬಬಲ್ ಪ್ರವೇಶಿಸಲು ಮೊಯಿನ್ ಕಡ್ಡಾಯವಾಗಿ ಮೂರು ದಿನಗಳ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ. ಆದ್ದರಿಂದ, ಅವರು ಆರಂಭಿಕ ಪಂದ್ಯವನ್ನು ಆಡುವ ಸಾಧ್ಯತೆಗಳು ದೂರದಲ್ಲಿದೆ ಎಂಬುದನ್ನ ಸಿಎಸ್‌ಕೆ ಆಡಳಿತ ಮಂಡಳಿ ಒಪ್ಪಿಕೊಂಡಿದೆ.
ಎಡಗೈ ಆಟಗಾರ ಅಲಿ ಮೊದಲ ಪಂದ್ಯವನ್ನು ಮಿಸ್ ಮಾಡಿಕೊಂಡರೆ ಧೋನಿ ಪಡೆ ನ್ಯೂಜಿಲ್ಯಾಂಡ್ ಬ್ಯಾಟರ್ ಡೆವೊನ್ ಕಾನ್ವೇಗೆ ಅವಕಾಶ ನೀಡುವ ಸಾಧ್ಯತೆ ಇದೆ. ಅಗ್ರ ಕ್ರಮಾಂಕದಲ್ಲಿ ರುತುರಾಜ್ ಗಾಯಕ್ವಾಡ್ ಮತ್ತು ರಾಬಿನ್ ಉತ್ತಪ್ಪ ಅವರೊಂದಿಗೆ ಬ್ಯಾಟಿಂಗ್ ಆರಂಭಿಸಬಹುದು. ಮತ್ತೊಂದೆಡೆ ಸ್ಟೈಲಿಶ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರು ಮಾರ್ಚ್ 27 ರಂದು ದೆಹಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿರುವ ಮುಂಬೈ ಇಂಡಿಯನ್ಸ್‌ನ ಆರಂಭಿಕ ಪಂದ್ಯವನ್ನು ಕಳೆದುಕೊಳ್ಳಲಿದ್ದಾರೆ.
ಫೆಬ್ರವರಿ 22 ರಂದು ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿಯ ಅಂತಿಮ ಪಂದ್ಯದಲ್ಲಿ ಹೆಬ್ಬೆರಳಿನ ಮುರಿತಕ್ಕೆ ಒಳಗಾದ 31 ವರ್ಷ ವಯಸ್ಸಿ ಯಾದವ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಿಂದ ಬಿಡುಗಡೆಯಾಗದೆ ಪುನಶ್ಚೇತನದಲ್ಲಿದ್ದಾರೆ.
ಇದನ್ನೂ ಓದಿ: ಎಬಿಡಿ ಬ್ಯಾಟಿಂಗ್ ವೈಖರಿ ನೆನಪಿಸಿದ ಮಿನಿ ಎಬಿಡಿ: ನೆಟ್ನಲ್ಲಿ ಬ್ರೇವಿಸ್ ಭರ್ಜರಿ ಬ್ಯಾಟಿಂಗ್