ಮುಂಬೈ:ಇಂಡಿಯನ್ ಪ್ರೀಮಿಯರ್ ಲೀಗ್ನ 15ನೇ ಆವೃತ್ತಿಯೂ ಮಾರ್ಚ್ 26ರಿಂದ ಆರಂಭವಾಗಲಿದೆ ಎಂದು ಬಿಸಿಸಿಐ ತಿಳಿಸಿದ್ದು, ಸ್ಟಾರ್ ಸ್ಪೋರ್ಟ್ಸ್ ಮನವಿಯಂತೆ ಶನಿವಾರದಂದೇ ಆರಂಭಿಸಲು ತೀರ್ಮಾನಿಸಿದೆ.
ಶನಿವಾರ ಐಪಿಎಲ್ ಆಡಳಿತ ಮಂಡಳಿಯ ಸಭೆಯಲ್ಲಿ ಮಾರ್ಚ್ 26ರಂದು ನಗದು ಸಮೃದ್ಧ ಲೀಗ್ ಆರಂಭಿಸಲು ತೀರ್ಮಾನಿಸಲಾಗಿದೆ. ವರ್ಚುಯಲ್ ಜನರಲ್ ಕೌನ್ಸಿಲ್ ಸಭೆಯಲ್ಲಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಸಂಪೂರ್ಣ ಮಹಾರಾಷ್ಟ್ರದಲ್ಲೇ ನಡೆಯಲಿದೆ ಎನ್ನುವುದು ಖಚಿತವಾಗಿದೆ. 55 ಪಂದ್ಯಗಳು ಮುಂಬೈನಲ್ಲಿ ಮತ್ತು 16 ಪಂದ್ಯಗಳು ಪುಣೆಯಲ್ಲಿ ನಡೆಯಲಿವೆ.
15ನೇ ಆವೃತ್ತಿಯ ಲೀಗ್ಗಾಗಿ 4 ಸ್ಟೇಡಿಯಂ ಆಯ್ಕೆ ಮಾಡಿಕೊಳ್ಳಲಾಗಿದೆ. ವಾಂಖೆಡೆಯಲ್ಲಿ 20 , ಬ್ರಾಬೋರ್ನ್ ಸ್ಟೇಡಿಯಂನಲ್ಲಿ 15, ಡಿವೈ ಪಾಟೀಲ್ ಸ್ಟೇಡಿಯಂದಲ್ಲಿ 20 ಮತ್ತು ಮಹರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ 15 ಪಂದ್ಯಗಳು ನಡೆಯಲಿವೆ. ಇನ್ನು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಾಟೀಲ್ ಈ ಬಾರಿ ಲೀಗ್ ಪ್ರೇಕ್ಷಕರ ಸಮ್ಮುಖದಲ್ಲಿ ನಡೆಯಲಿದೆ ಎನ್ನುವುದನ್ನು ಖಚಿತಪಡಿಸಿದ್ದಾರೆ.
ಐಪಿಎಲ್ ಮಾರ್ಚ್ 26ರಂದು ಆರಂಭಗೊಳ್ಳಲಿದೆ. ಸಂಪೂರ್ಣ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಮಹರಾಷ್ಟ್ರ ಸರ್ಕಾರದ ನಿಯಮಗಳ ಅನುಸಾರ ಈ ಬಾರಿ ಪ್ರೇಕ್ಷಕರಿಗೂ ಅನುಮತಿ ನೀಡಲಾಗುವುದು. ಅದು ಸ್ಟೇಡಿಯಂನ ಶೇ.50 ಅಥವಾ ಶೆ.25ರಷ್ಟಿರಬಹುದು, ಅದನ್ನು ಸರ್ಕಾರ ನಿರ್ಧರಿಸಲಿದೆ ಎಂದು ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ. ಮೇ 29ರಂದು ಟೂರ್ನಮೆಂಟ್ ಫೈನಲ್ ನಡೆಯಲಿದೆ. ಆದರೆ ಪ್ಲೇ ಆಫ್ ವೇಳಾಪಟ್ಟಿಯನ್ನು ಇನ್ನೂ ನಿಗದಿ ಮಾಡಿಲ್ಲ, ನಾವು ಅದನ್ನು ನಂತರ ನಿರ್ಧರಿಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.