ಪುಣೆ : ಸತತ 3 ಸೋಲು ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನ ಹಳಿಗೆ ಮರಳುವ ಉತ್ಸಾಹದಲ್ಲಿದೆ. 15ನೇ ಆವೃತ್ತಿಯಲ್ಲಿ ಉತ್ತಮ ಆರಂಭ ಪಡೆದಿದ್ದ ಆರ್ಸಿಬಿ ಕಳೆದ 3 ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿದೆ.
9ನೇ ಸ್ಥಾನದಲ್ಲಿರುವ ಸಿಎಸ್‌ಕೆ ಈಗಾಗಲೇ 6 ಸೋಲು ಕಂಡಿದ್ದು ಪ್ಲೇ ಆಫ್ ಪ್ರವೇಶಿಸಿಲು ಉಳಿದಿರುವ 5 ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಕಳೆದ ಪಂದ್ಯದಲ್ಲಿ ಧೋನಿ ನಾಯಕತ್ವಕ್ಕೆ ಕಮ್ಬ್ಯಾಕ್ ಆಗುತ್ತಿದ್ದಂತೆ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯ ಸಾಧಿಸಿರುವ ಹುಮ್ಮಸ್ಸಿನಲ್ಲಿದೆ. ಅದೇ ರೀತಿ ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ ಸಿಎಸ್‌ಕೆ.
ಎರಡೂ ತಂಡಗಳು ಈಗಾಗಲೇ ಲೀಗ್ನಲ್ಲಿ ಒಮ್ಮೆ ಮುಖಾಮುಖಿಯಾಗಿವೆ. ಶಿವಂ ದುಬೆ ಮತ್ತು ರಾಬಿನ್ ಉತ್ತಪ್ಪ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ 216 ರನ್ಗಳ ಬೃಹತ್ ಮೊತ್ತ ದಾಖಲಿಸಿ 23 ರನ್ಗಳ ಗೆಲುವು ಸಾಧಿಸಿತ್ತು. ಇದೀಗ ಋತುರಾಜ್ ಗಾಯಕ್ವಾಡ್ ಮತ್ತು ಡೆವೋನ್ ಕಾನ್ವೆ ಕೂಡ ಅದ್ಭುತ ಫಾರ್ಮ್ನಲ್ಲಿರುವುದರಿಂದ ಬ್ಯಾಟಿಂಗ್‌ಗೆ ಆನೆ ಬಲ ಬಂದಿದೆ. ಕಳೆದ ಪಂದ್ಯದಲ್ಲಿ ಬಲಿಷ್ಠ ಹೈದರಾಬಾದ್ ಬೌಲಿಂಗ್ ಎದುರು ಈ ಜೋಡಿ 182 ರನ್ಗಳ ಆರಂಭಿಕ ಜೊತೆಯಾಟ ನಡೆಸಿ ದಾಖಲೆ ಬರೆದಿತ್ತು.
10 ಪಂದ್ಯಗಳನ್ನಾಡಿ 6ನೇ ಸ್ಥಾನದಲ್ಲಿರುವ ಆರ್ಸಿಬಿ ರನ್ರೇಟ್ ಋಣಾತ್ಮಕವಾಗಿರುವುದರಿಂದ ಪ್ಲೇ ಆಫ್ ಪ್ರವೇಶಿಸಲು ಉಳಿದ 4 ಪಂದ್ಯಗಳನ್ನು ಗೆಲ್ಲಬೇಕಿದೆ. ಸಮಾಧಾನಕರ ಅಂಶವೆಂದರೆ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದ ವಿರಾಟ್ ಕೊಹ್ಲಿ ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದರು. ಹಾಗಾಗಿ, ಈ ಪಂದ್ಯದಲ್ಲೂ ಕೊಹ್ಲಿಯಿಂದ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸುತ್ತಿದೆ.
ಆರ್ಸಿಬಿ ವಿರುದ್ಧ ಸಿಎಸ್‌ಕೆ ಅಮೋಘ ದಾಖಲೆ : ಎರಡೂ ತಂಡಗಳು ಐಪಿಎಲ್ನಲ್ಲಿ 29 ಬಾರಿ ಮುಖಾಮುಖಿಯಾಗಿವೆ. ಆರ್ಸಿಬಿ ಕೇವಲ 9 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಸಿಎಸ್‌ಕೆ 19 ಜಯ ಸಾಧಿಸಿದ್ದು, 1 ಪಂದ್ಯದ ಫಲಿತಾಂಶ ಬಂದಿಲ್ಲ.
ಇದನ್ನೂ ಓದಿ:ಬಲಿಷ್ಠ ಗುಜರಾತ್ ವಿರುದ್ಧ ಗೆದ್ದ ಪಂಜಾಬ್.. ಪಾಯಿಂಟ್ ಪಟ್ಟಿಯಲ್ಲಿ ಆರ್ಸಿಬಿ ಹಿಂದಿಕ್ಕಿದ ಮಯಾಂಕ್ ಬಳಗ