ಬೆಂಗಳೂರು: 2022 ಐಪಿಎಲ್ ಆರಂಭಕ್ಕೆ ಕೆಲವೇ ದಿನಗಳಿರುವಾಗಲೇ ಗುಜರಾತ್ ಲಯನ್ಸ್ ತಂಡದಿಂದ ಹೊರಬಂದಿರುವ ಇಂಗ್ಲೆಂಡ್ನ ಆರಂಭಿಕ ಬ್ಯಾಟರ್ ಜೇಸನ್ ರಾಯ್ ಬದಲೀ ಆಟಗಾರನಾಗಿ ಅಫ್ಘಾನಿಸ್ತಾನದ ಯುವ ವಿಕೆಟ್ ಕೀಪರ್ ರೆಹ್ಮಾನುಲ್ಲಾ ಗುರ್ಬಜ್ ತಂಡ ಸೇರಲು ಸಜ್ಜಾಗಿದ್ದಾರೆ.
10 ತಂಡಗಳ ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 26ರಿಂದ ಆರಂಭವಾಗಲಿದೆ. ಆದರೆ ಟೂರ್ನಿ ಆರಂಭಕ್ಕೂ ಮುನ್ನ ಜೇಸನ್ ರಾಯ್ ಬಯೋಬಬಲ್ ಆಯಾಸದ ಕಾರಣ ನೀಡಿ ಟೂರ್ನಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದರು. ಆರಂಭಿಕ ಸ್ಥಾನಕ್ಕೆ ರಾಯ್ರನ್ನು ನೆಚ್ಚಿಕೊಂಡಿದ್ದ ಗುಜರಾತ್ ಫ್ರಾಂಚೈಸಿ ಇದೀಗ ಅಫ್ಘಾನ್ ಯುವ ಪ್ರತಿಭೆಗೆ ಮಣೆ ಹಾಕಲು ನಿರ್ಧರಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
20 ವರ್ಷದ ಸ್ಫೋಟಕ ಬ್ಯಾಟರ್ 150+ ಸ್ಟ್ರೈಕ್ರೇಟ್ನಲ್ಲಿ ರನ್ ಗಳಿಸಿರುವುದಲ್ಲದೆ, ಅದ್ಭುತ ವಿಕೆಟ್ ಕೀಪರ್ ಆಗಿಯೂ ತಂಡಕ್ಕೆ ನೆರವಾಗಬಲ್ಲರು. ರಾಷ್ಟ್ರೀಯ ತಂಡ ಖಾಯಂ ಬ್ಯಾಟರ್ ಆಗಿರುವ ಗುರ್ಬಜ್ ಅಫ್ಘಾನಿಸ್ತಾನ ತಂಡದ ಪರ 9 ಏಕದಿನ ಹಾಗೂ 12 ಟಿ20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 428 ಮತ್ತು 534 ರನ್ಗಳಿಸಿದ್ದಾರೆ. ಇನ್ನು ಟಿ20 ಕ್ರಿಕೆಟ್ನಲ್ಲಿ 69 ಪಂದ್ಯಗಳಿಂದ 10 ಅರ್ಧಶತಕ ಸಹಿತ 1620 ರನ್ ಸಿಡಿಸಿದ್ದಾರೆ.
ಗುಜರಾತ್ ಟೈಟನ್ಸ್ ಇನ್ನೂ ಅಧಿಕೃತವಾಗಿ ಗುರ್ಬಜ್ ಸೇರ್ಪಡೆಯನ್ನು ಘೋಷಿಸಿಲ್ಲ. ಆದರೆ ತಂಡದಲ್ಲಿರುವ ಅಫ್ಘಾನಿಸ್ತಾನದ ಪ್ರಧಾನ ಬೌಲರ್ ರಶೀದ್ ಖಾನ್ ಅವರಿಂದ ಯುವ ಬ್ಯಾಟರ್ ಬಗ್ಗೆ ಮಹತ್ವದ ಮಾಹಿತಿ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ. ಇನ್ನು ಅವರು ಈಗಾಗಲೇ ಫ್ರಾಂಚೈಸಿ ಜೊತೆಗೆ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ ಎಂದು ಕೆಲವು ಮಾಜಿ ಅಫ್ಘಾನ್ ಕ್ರಿಕೆಟಿಗರು ಗುರ್ಬಜ್ಗೆ ಶುಭಕೋರಿದ್ದಾರೆ.
ಒಂದು ವೇಳೆ ರೆಹಮನುಲ್ಲಾ ಗುರ್ಬಾಜ್ ಗುಜರಾತ್ ಟೈಟನ್ಸ್ ತಂಡ ಸೇರ್ಪಡೆಯಾದರೆ ವಿಕೆಟ್ ಕೀಪಿಂಗ್ ಸಮಸ್ಯೆ ಕೂಡ ಬಗೆಹರಿಯಲಿದೆ. ಏಕೆಂದರೆ ಹರಾಜಿನಲ್ಲಿ ಫ್ರಾಂಚೈಸಿ ಆಸ್ಟ್ರೇಲಿಯಾದ ಮ್ಯಾಥ್ಯೂ ವೇಡ್ ಮತ್ತು ವೃದ್ದಿಮಾನ್ ಸಹಾರನ್ನು ವಿಕೆಟ್ ಕೀಪರ್ ಸ್ಥಾನಕ್ಕೆ ಖರೀದಿಸಿದೆ. ಪ್ರಧಾನ ಆಯ್ಕೆಯಾಗಿರುವ ವೇಡ್ ಪಾಕಿಸ್ತಾನ ಪ್ರವಾಸದಲ್ಲಿರುವ ಕಾರಣ ಕೆಲವು ಲೀಗ್ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಹಾಗಾಗಿ ಗುರ್ಬಜ್ ಸೇರ್ಪಡೆ ತಂಡಕ್ಕೆ ಎರಡೂ ರೀತಿಯಲ್ಲಿ ಅನುಕೂಲ ತಂದುಕೊಡಲಿದೆ.
ಇದನ್ನೂ ಓದಿ:ಐಪಿಎಲ್ ಫ್ರಾಂಚೈಸಿಗಳಿಗೆ ಶಾಕ್ ಕೊಟ್ಟ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ