ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗದ ಬೌಲರ್ ಆವೇಶ್ ಖಾನ್ ಅತ್ಯದ್ಭುತ ಪ್ರದರ್ಶನ ನೀಡುತ್ತಿದ್ದು, ಆಡಿರುವ 14 ಪಂದ್ಯಗಳಿಂದ 22 ವಿಕೆಟ್ ಪಡೆದುಕೊಂಡಿದ್ದಾರೆ. ಈ ಮೂಲಕ ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದುಕೊಂಡಿರುವ ಪೈಕಿ ಎರಡನೇ ಬೌಲರ್ ಆಗಿದ್ದಾರೆ.
ಈ ಸೀಸನ್ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಆವೇಶ್ ಖಾನ್, ಟೀಂ ಇಂಡಿಯಾ ತಂಡದಲ್ಲಿ ಆಡುವ ಅತಿದೊಡ್ಡ ಕನಸು ಇಟ್ಟುಕೊಂಡಿದ್ದು, ಇದರ ಬಗ್ಗೆ ಈಟಿವಿ ಭಾರತ ಜೊತೆ EXCLUSIVE ಆಗಿ ಫೋನ್-ಇನ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಭಾರತೀಯ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳುವುದೇ ನನ್ನ ಅತಿ ದೊಡ್ಡ ಆಸೆಯಾಗಿದ್ದು, ದೇಶಕ್ಕಾಗಿ ಆಡಬೇಕು ಎಂಬ ಕನಸು ಕಾಣುತ್ತಿದ್ದೇನೆ ಎಂದು ವೇಗದ ಬೌಲರ್ ತಿಳಿಸಿದ್ದಾರೆ.
- ವೇಗಿ ಆವೇಶ್ ಖಾನ್ ಜೊತೆ ಪ್ರಶ್ನೋತ್ತರ ಈ ರೀತಿಯಾಗಿದೆ....
ಪ್ರತಿಯೊಬ್ಬರು ನಿಮ್ಮ ಯಾರ್ಕರ್ ಬಗ್ಗೆ ಮಾತನಾಡ್ತಾರೆ. ಅದರ ಮೇಲೆ ನಿಮಗೆ ಸಂಪೂರ್ಣ ನಿಯಂತ್ರಣವಿದೆ ಎಂದು ತೋರುತ್ತದೆ. ಇದರ ಬಗ್ಗೆ ನಿಮ್ಮ ಮಾತು
ನೆಟ್ಗಳಲ್ಲಿ ಬೌಲಿಂಗ್ ಮಾಡುವಾಗ ಯಾರ್ಕರ್ಗಳ ಬಗ್ಗೆ ಸಾಕಷ್ಟು ಕಲಿತಿದ್ದೇನೆ. ಪ್ರಮುಖವಾಗಿ ಒತ್ತಡದ ಸಂದರ್ಭಗಳಲ್ಲಿ ಯಾರ್ಕರ್ ಮಾಡುವುದರಿಂದ ಸ್ಕೋರ್ ಮಾಡಲು ಕಷ್ಟವಾಗುತ್ತದೆ. ಅತಿ ಹೆಚ್ಚು ಯಾರ್ಕರ್ ಬೌಲಿಂಗ್ ಮಾಡುವ ಅಭ್ಯಾಸ ಮಾಡುತ್ತಿರುತ್ತೇನೆ. ಅಭ್ಯಾಸದ ಅವಧಿಯಲ್ಲಿ 10-12 ಯಾರ್ಕರ್ ಮಾಡುವುದರಿಂದ ನನಗೆ ಆತ್ಮವಿಶ್ವಾಸ ಬರುತ್ತದೆ.
- ಡೆಲ್ಲಿ ಬೌಲರ್ಗಳಾದ ರಬಾಡಾ, ಎನ್ರಿಚ್ರಿಂದ ಏನು ಕಲಿತಿದ್ದೀರಿ?
ವೇಗದ ಬೌಲರ್ಗಳಾದ ರಬಾಡಾ ಹಾಗೂ ಎನ್ರಿಚ್ರಿಂದ ಸಾಕಷ್ಟು ಕಲಿಯಲು ಅವಕಾಶ ಸಿಕ್ಕಿದೆ. ಪಂದ್ಯ ನಡೆಯುತ್ತಿದ್ದಾಗ ಯಾವ ರೀತಿಯಾಗಿ ಚೆಂಡು ಬೌಲ್ ಮಾಡಬೇಕೆಂಬುದರ ಬಗ್ಗೆ ಸಾಕಷ್ಟು ಮಾತನಾಡುತ್ತೇವೆ. ಪಂದ್ಯದಲ್ಲಿ ಮೊದಲ ಓವರ್ ಬೌಲ್ ಮಾಡಿದವರ ಬಳಿ ಹೋಗಿ ವಿಕೆಟ್ ಹೇಗಿದೆ. ಯಾವ ಎಸೆತ ಕೆಲಸ ಮಾಡುತ್ತದೆ ಎಂದು ಮಾಹಿತಿ ಪಡೆದುಕೊಳ್ಳುತ್ತೇನೆ.
- ಬಾಲ್ಯದಲ್ಲಿ ನಿಮ್ಮ ಸ್ಪೂರ್ತಿ ಯಾರು? ಟೀಂ ಇಂಡಿಯಾದ ಯಾವ ಬೌಲರ್ ನಿಮಗೆ ಆರಾಧ್ಯ ದೈವ?
ನಾನು ಎಂದಿಗೂ ರೋಲ್ ಮಾಡೆಲ್ ಹೊಂದಿಲ್ಲ. ಆದರೆ 5-6 ಬೌಲರ್ಗಳಿಂದ ಸಾಕಷ್ಟು ಕಲಿತಿದ್ದೇನೆ. ಡೇಲ್ ಸ್ಟೈನ್ ಬೌಲ್ ಮಾಡುವುದನ್ನ ಇಷ್ಟಪಡುತ್ತೇನೆ. ಶಮಿ ಭಾಯಿ, ಇಶಾಂತ್ ಭಾಯಿ ಬೌಲ್ ಮಾಡುವುದನ್ನ ಸಹ ಇಷ್ಟಪಡುತ್ತೇನೆ. ನನಗೆ ಯಾವುದೇ ಆರಾಧ್ಯ ದೈವ್ ಇಲ್ಲ. ಆದರೆ, ಬೌಲರ್ಗಳ ಬೌಲಿಂಗ್ ಶೈಲಿಯಿಂದ ಕಲಿತುಕೊಂಡಿದ್ದೇನೆ.
- ರಿಕಿ ಪಾಂಟಿಂಗ್ ನಿಮ್ಮ ವೃತ್ತಿ ಜೀವನದಲ್ಲಿ ಎಷ್ಟು ಪ್ರಭಾವಶಾಲಿ?
ರಿಕಿ ಸರ್ ಯಾವಾಗಲೂ ಸಕಾರಾತ್ಮಕವಾಗಿ ಮಾತನಾಡುತ್ತಾರೆ. ಚೆನ್ನಾಗಿ ಯೋಜನೆ ರೂಪಿಸಿ, ಕಾರ್ಯಗತಗೊಳಿಸಿದರೆ ಫಲಿತಾಂಶ ಯಾವಾಗಲೂ ನಮ್ಮ ಪರವಾಗಿರುತ್ತದೆ ಎಂದು ಹೇಳುತ್ತಾರೆ. ಪಂದ್ಯ ಮುಕ್ತಾಯದ ಬಳಿಕ ಮಾತನಾಡುವಾಗ ಹೊಸ ಹೊಸ ವಿಷಯ ಹಂಚಿಕೊಳ್ಳುತ್ತಾರೆ. ಉತ್ತಮ ಆಟಗಾರನ ಜೊತೆ ಅವರು ಉತ್ತಮ ತರಬೇತುದಾರ ಎಂದಿದ್ದಾರೆ.
- ಈ ವರ್ಷದ ಐಪಿಎಲ್ ಚಾಂಪಿಯನ್ ಬಗ್ಗೆ ನಿಮ್ಮ ಪ್ರತಿಕ್ರಿಯೆ
ಐಪಿಎಲ್ ಗೆಲ್ಲುವುದು ಖಂಡಿತವಾಗಿ ನಮ್ಮ ಅಂತಿಮ ಗುರಿ.ಈ ಋತುವಿನಲ್ಲಿ ಖಂಡಿತವಾಗಿ ಉತ್ತಮವಾಗಿ ಆಡಿದ್ದೇವೆ. ಪ್ರತಿ ಪಂದ್ಯದಲ್ಲೂ ಸುಧಾರಿಸುತ್ತಲೇ ಇದ್ದೇವೆ. ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮುವ ಬಗ್ಗೆ ನಮಗೆ ಖಂಡಿತ ವಿಶ್ವಾಸವಿದೆ.
- ಭಾರತಕ್ಕಾಗಿ ಆಡುವುದು, ಇತರ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳುವ ಅನುಭವದ ಬಗ್ಗೆ
ಖಂಡಿತವಾಗಿ, ಭಾರತಕ್ಕಾಗಿ ಆಡುವುದು ನನ್ನ ಅತಿದೊಡ್ಡ ಕನಸು. ಟೀಂ ಇಂಡಿಯಾ ಪರ ಬೌಲಿಂಗ್ ಮಾಡುವಾಗಿ ಹಾಗೂ ದೇಶದ ಅತ್ಯುತ್ತಮ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಂ ಹಂಚಿಕೊಂಡಾಗ ನನ್ನಲ್ಲಿರುವ ವಿಶ್ವಾಸ ಮತ್ತಷ್ಟು ಇಮ್ಮಡಿಗೊಳ್ಳುತ್ತದೆ. ಆದರೆ, ಸದ್ಯ ಐಪಿಎಲ್ನಲ್ಲಿ ಬೌಲಿಂಗ್ ಮಾಡುತ್ತಿರುವ ಬಗ್ಗೆ ನನಗೆ ಸಂತೋಷವಿದೆ.
ಪ್ರಸಕ್ತ ವರ್ಷದ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹರ್ಷಲ್ ಪಟೇಲ್ ಅತಿ ಹೆಚ್ಚು 30 ವಿಕೆಟ್ ಪಡೆದುಕೊಂಡಿದ್ದು, ಆವೇಶ್ ಖಾನ್ 22 ವಿಕೆಟ್ ಕಿತ್ತು ಎರಡನೇ ಸ್ಥಾನದಲ್ಲಿದ್ದಾರೆ.