ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ಅವರ ದಾಖಲೆಯನ್ನು ಬ್ರೇಕ್ ಮಾಡಿ ಫ್ರಾಂಚೈಸಿ ಪರ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಮಂಗಳವಾರ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಪರ ಪಂತ್ 36 ಎಸೆತಗಳಲ್ಲಿ 39 ರನ್ಗಳಿಸಿದ್ದರು. ಈ ಸಂದರ್ಭದಲ್ಲಿ ಮಾಜಿ ಡೆಲ್ಲಿ ತಂಡದನಾಯಕ ವೀರೇಂದ್ರ ಸೆಹ್ವಾಗ್ ಅವರನ್ನು ಹಿಂದಿಕ್ಕಿದ್ದರು.
ಸೆಹ್ವಾಗ್ 85 ಇನ್ನಿಂಗ್ಸ್ಗಳಲ್ಲಿ 2382 ರನ್ಗಳಿಸಿ ಇಲ್ಲಿಯವರೆಗೂ ಡೆಲ್ಲಿ ತಂಡದ ಗರಿಷ್ಠ ಸ್ಕೋರರ್ ಆಗಿದ್ದರು. ರಿಷಭ್ ಪಂತ್ ಮಂಗಳವಾರ ತಮ್ಮ ಹೆಸರಿಗೆ ಬರೆದುಕೊಂಡರು. ಸ್ಫೋಟಕ ಬ್ಯಾಟರ್ ಪಂತ್ 2017ರಿಂದಲೂ ಡೆಲ್ಲಿ ತಂಡದಲ್ಲೇ ಆಡುತ್ತಿದ್ದು, ಕೇವಲ 75 ಇನ್ನಿಂಗ್ಸ್ಗಳಲ್ಲಿ 2390 ರನ್ಗಳಿಸಿದ್ದಾರೆ.
ಡೆಲ್ಲಿಯ ಮಾಜಿ ನಾಯಕ ಶ್ರೇಯಸ್ ಅಯ್ಯರ್ 82 ಇನ್ನಿಂಗ್ಸ್ಗಳಲ್ಲಿ 2291 ರನ್ಗಳಿಸಿ 3ನೇ ಸ್ಥಾನ ಪಡೆದುಕೊಂಡಿದ್ದಾರೆ. 2008ರಲ್ಲಿ ದೆಹಲಿಯ ಪರ ಐಪಿಎಲ್ಗೆ ಪದಾರ್ಪಣೆ ಮಾಡಿ 2018ರಲ್ಲಿ ಮತ್ತೆ ಡೆಲ್ಲಿ ಸೇರಿರುವ ಹಿರಿಯ ಬ್ಯಾಟರ್ ಶಿಖರ್ ಧವನ್ 58 ಇನ್ನಿಂಗ್ಸ್ಗಳಲ್ಲಿ 1933 ರನ್ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ.
ಪ್ರಸ್ತುತ ಡೆಲ್ಲಿ 8 ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಉತ್ತಮ ಫಾರ್ಮ್ನಲ್ಲಿರುವ ಪಂತ್, ಅಯ್ಯರ್ ಮತ್ತು ಧವನ್ ತಂಡವನ್ನು ಪ್ಲೇ ಆಫ್ಗೆ ಕೊಂಡೊಯ್ಯಲಿದ್ದಾರೆ ಎಂಬ ಭರವಸೆಯಲ್ಲಿ ಫ್ರಾಂಚೈಸಿ ಇದೆ. ಕಳೆದ ವರ್ಷ ಉತ್ತಮ ಪ್ರದರ್ಶನ ತೋರಿಯೂ ಫೈನಲ್ನಲ್ಲಿ ಮುಗ್ಗರಿಸಿದ್ದ ಕ್ಯಾಪಿಟಲ್ಸ್ ಈ ಬಾರಿ ಪ್ರಶಸ್ತಿ ಎತ್ತಿ ಹಿಡಿಯುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ.
ಇದನ್ನೂ ಓದಿ: T20 World Cup|2007ರ ಇತಿಹಾಸ ಮರುಸೃಷ್ಟಿಸಲು ಪ್ರತಿಯೊಬ್ಬರೂ ಪ್ರಯತ್ನಿಸಲಿದ್ದೇವೆ: ರೋಹಿತ್