ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ನ ಆರಂಭದಲ್ಲಿ ಸತತ ಎರಡು ಸೋಲುಗಳ ನಂತರ ನಮ್ಮ ತಂಡ ಡೆತ್ ಬೌಲಿಂಗ್‌ನಲ್ಲಿ 'ನಿಜವಾಗಿಯೂ ಶ್ರಮಿಸಿದೆ' ಎಂದು ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಹೇಳಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಗಿದೆ. ವಾರ್ನರ್ ನೇತೃತ್ವದ ತಂಡ, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮೊದಲ ಪಂದ್ಯವನ್ನು ಕಳೆದುಕೊಂಡರೆ, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಎರಡನೇ ಸೋಲು ಅನುಭವಿಸಿತ್ತು.
ಮಂಗಳವಾರ ನಡೆದ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ವಾರ್ನರ್ ಪಡೆ 15 ರನ್ಗಳ ಜಯ ದಾಖಲಿಸಿದ್ದು, ಜಯದ ಖಾತೆ ತೆರೆದಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ಡೇವಿಡ್ ವಾರ್ನರ್, ಡೆತ್ ಬೌಲಿಂಗ್‌ನಲ್ಲಿ ನಿಜವಾಗಿಯೂ ನಾವು ಶ್ರಮ ಹಾಕಿದ್ದೇವೆ. ನಮ್ಮ ಬೌಲರ್ಗಳು ಅದ್ಭುತ ಪ್ರದರ್ಶನ ತೋರಿದ್ದಾರೆ. ಬ್ಯಾಟಿಂಗ್ನಲ್ಲಿ ಹೆಚ್ಚು ಬೌಂಡರಿ ಗಳಿಸಲು ಸಾಧ್ಯವಾಗದ ನಾವು, ಸಿಂಗಲ್, ಡಬಲ್ ಮೂಲಕ ಹೆಚ್ಚು ರನ್ ಗಳಿಸಿದ್ದೇವೆ. ಈ ಬಗ್ಗೆ ನಮಗೆ ಹೆಮ್ಮೆ ಇದೆ. ಬೌಂಡರಿ ಗಳಿಸಲು ಸಾಧ್ಯವಾಗದಿದ್ದರೆ ಇನ್ನೂ ಕಷ್ಟಪಟ್ಟು ಓಡುತ್ತೇವೆ ಎಂದಿದ್ದಾರೆ.
ದುರದೃಷ್ಟವಶಾತ್ ಮಿಚೆಲ್ ಮಾರ್ಷ್ ಗಾಯಗೊಂಡ ಕಾರಣ ಟೂರ್ನಿಯಿಂದ ಹೊರಗುಳಿಯಬೇಕಾಯಿತು. ಹೀಗಾಗಿ ಯಾರು ಕೆಲ ಓವರ್ ಉತ್ತಮಬಾಗಿ ಬೌಲಿಂಗ್ ಮಾಡಬಲ್ಲರು ಎಂದು ಗುರುತಿಸುತ್ತಿದ್ದೆವು, ಯುವ ಆಟಗಾರ ಅಭಿಷೇಕ್ ನಿಜವಾಗಿಯೂ ಉತ್ತಮವಾಗಿ ಬೌಲಿಂಗ್ ಮಾಡಿದರು ಎಂದು ವಾರ್ನರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ ತಂಡ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿತು. ಮರುತ್ತರವಾಗಿ ಬ್ಯಾಟಿಂಗ್ ನಡೆಸಿದ ಡೆಲ್ಲಿ ತಂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕಂಡು 147 ರನ್ ಗಳಿಸಿ 15 ರನ್ಗಳಿಂದ ವಾರ್ನರ್ ಪಡೆಗೆ ಶರಣಾಯಿತು.