ದುಬೈ : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಅವರನ್ನು ಅವರದೇ ತಂಡದ ಆಲ್ ರೌಂಡರ್ ಸುರೇಶ್ ರೈನಾ ಅಭಿನಂದಿಸಿದ್ದಾರೆ.
ಐಪಿಎಲ್ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನಾಡಿರುವ ದಾಖಲೆ ಸುರೇಶ್ ರೈನಾ (193 ಪಂದ್ಯ) ಅವರ ಹೆಸರಲ್ಲಿತ್ತು. ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಶುಕ್ರವಾರ (ಅ.2) ನಡೆದ ಐಪಿಎಲ್ 14ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿದಿದ್ದ ಎಂಎಸ್ ಧೋನಿ, 194ನೇ ಪಂದ್ಯ ಆಡುವ ಮೂಲಕ ಸುರೇಶ್ ರೈನಾ ಅವರ ಹೆಸರಲ್ಲಿದ್ದ ದಾಖಲೆ ಅಳಿಸಿ ಹಾಕಿದರು.
ಧೋನಿಗೆ ಅಭಿನಂದನೆ ಹೇಳಿರುವ ಸುರೇಶ್ ರೈನಾ, ಐಪಿಎಲ್ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನಾಡಿರುವ ದಾಖಲೆ ನಿರ್ಮಿಸಿದ್ದಕ್ಕೆ ಅಭಿನಂದನೆಗಳು, ನಿಮ್ಮಿಂದ ನನ್ನ ದಾಖಲೆ ಮರೆಯಾಗುತ್ತಿರುವುದಕ್ಕೆ ಸಂತೋಷವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ನಿನ್ನೆ ನಡೆದ (ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ) ಪಂದ್ಯದಲ್ಲಿ ಧೊನಿ ಗೆದ್ದು ಬರಲಿದ್ದಾರೆ ಎಂದು ವಿಸ್ವಾಶ ವ್ಯಕ್ತಪಡಿಸಿ ಆಲ್ ದಿ ಬೆಸ್ಟ್ ತಿಳಿಸಿದ್ದರು. ಆದರೆ, ಸನ್ ರೈಸರ್ಸ್ ಹೈದರಾಬಾದ್ ತಂಡ ನೀಡಿದ ಸವಾಲನ್ನು ಸ್ವೀಕರಿಸಿದ್ದ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೇವಲ 7 ರನ್ಗಳಿಂದ ಸೋಲು ಕಂಡಿತು.
ಇದಕ್ಕೂ ಮುನ್ನ ನಡೆದ ಎರಡು ಪಂದ್ಯವನ್ನು ಕೈಚೆಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಈ ಸಲ (ಅ. 2) ಗೆಲ್ಲಲಿದೆ ಎಂದು ವಿಸ್ವಾಶ ವ್ಯಕ್ತಪಡಿಸಿ ಆಲ್ ದಿ ಬೆಸ್ಟ್ ತಿಳಿಸಿದ್ದ ಸುರೇಶ್ ರೈನಾ ಅವರ ಶುಭಾಶಯಗಳು ಕಾರ್ಯರೂಪಕ್ಕೆ ಬರಲಿಲ್ಲ.
ಐಪಿಎಲ್ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನಾಡಿರುವ ಆಟಗಾರರ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ 192 ಪಂದ್ಯಗಳನ್ನ ಆಡುವ ಮೂಲಕ ಮೂರನೇ ಸ್ಥಾನದಲ್ಲಿದ್ರೆ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ (185 ಪಂದ್ಯಗಳು) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ (180 ಪಂದ್ಯಗಳು) ಕ್ರಮವಾಗಿ ನಂತರದ ಸ್ಥಾನದಲ್ಲಿದ್ದಾರೆ.