ಅಬುಧಾಬಿ: ಭಾನುವಾರ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ 17 ರನ್‌ಗಳಿಂದ ಸನ್‌ರೈಸರ್ಸ್ ತಂಡವನ್ನು ಮಣಿಸಿದ ಡೆಲ್ಲಿ ತಂಡ ಚೊಚ್ಚಲ ಬಾರಿಗೆ ಐಪಿಎಲ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದೆ.
ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಅಯ್ಯರ್, "ಇದು ಈವರೆಗಿನ ಅತ್ಯುತ್ತಮ ಭಾವನೆ. ಇದೊಂದು ಮನೋರಂಜನಾ ಸವಾರಿ, ಭಾವನೆಗಳು ಹೆಚ್ಚು ಕಡಿಮೆ ಇರುತ್ತವೆ. ಆದ್ದರಿಂದ ನೀವು ಒಂದೇ ರೀತಿಯ ದಿನಚರಿ ಹೊಂದಲು ಸಾಧ್ಯವಿಲ್ಲ. ಮುಂದಿನ ಪಂದ್ಯದಲ್ಲೂ ಮುಂಬೈ ವಿರುದ್ಧ ನಾವು ಮುಕ್ತವಾಗಿ ಆಡಲು ಸಮರ್ಥರಾಗಿದ್ದೇವೆ" ಎಂದಿದ್ದಾರೆ.
"ನಾವು ಒಂದು ಕುಟುಂಬವಾಗಿ ಉತ್ತಮ ಪ್ರದರ್ಶನ ನೀಡಿದ್ದೇವೆ. ಪ್ರತಿಯೊಬ್ಬ ಆಟಗಾರನ ಪ್ರಯತ್ನದಿಂದ ತುಂಬಾ ಸಂತಸವಾಗಿದೆ. ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಯಿಂದ ಕೂಡ ಉತ್ತ ಬೆಂಬಲ ಪಡೆದಿದ್ದೇವೆ. ಇಂತಹ ತಂಡವನ್ನು ಹೊಂದಿರುವುದು ನಿಜಕ್ಕೂ ಅದೃಷ್ಟದ ವಿಷಯ" ಎಂದಿದ್ದಾರೆ.
ಅಬುಧಾಬಿಯಲ್ಲಿ ನಡೆದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಶ್ರೇಯಸ್ ಪಡೆ, ಶಿಖರ್ ಧವನ್(78), ಹೆಟ್ಮೈರ್ (42)ಹಾಗೂ ಸ್ಟೋಯ್ನಿಸ್ ಅವರ (38) ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 189 ರನ್ಗಳಿಸಿತ್ತು
190 ರನ್ಗಳ ಗುರಿ ಪಡೆದ ಹೈದರಾಬಾದ್ ಕೇನ್ ವಿಲಿಯಮ್ಸನ್ ಅವರ ಹೋರಾಟದ ಅರ್ಧಶತಕದ(67) ಹೊರತಾಗಿಯೂ 17 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಇತ್ತ ಬೌಲಿಂಗ್ ಮತ್ತು ಬ್ಯಾಟಿಂಗ್ನಲ್ಲಿ ಮಿಂಚಿದ ಡೆಲ್ಲಿ 13ನೇ ಐಪಿಎಲ್ನಲ್ಲಿ ಫೈನಲ್ಗೆ ಅರ್ಹತೆಗಿಟ್ಟಿಸಿತು.