ನವದೆಹಲಿ: ಕಳೆದ ಆವೃತ್ತಿಯ ಐಪಿಎಲ್ನಲ್ಲಿ ಬ್ಯಾಟ್ಸ್ಮನ್ಗಳಿಗೆ ನಡುಕ ಹುಟ್ಟಿಸಿ 26 ವಿಕೆಟ್ಗಳನ್ನು ಪಡೆಯುವ ಮೂಲಕ ಪರ್ಪಲ್ ಕ್ಯಾಪ್ಗೆ ಪಾತ್ರರಾಗಿದ್ದ ಚನ್ನೈ ಸೂಪರ್ ಕಿಂಗ್ಸ್ ತಂಡದ ಸ್ಪಿನ್ನರ್ ಇಮ್ರಾನ್ ತಾಹೀರ್, ಈ ಋತುವಿನ ಒಂದೂ ಪಂದ್ಯದಲ್ಲಿ ಇನ್ನು ಕಾಣಿಸಿಕೊಳ್ಳದಿರುವುದು ಆಶ್ಚರ್ಯದ ಸಂಗತಿ. ಅವರೊಬ್ಬರೇ ಅಲ್ಲ, ಡೆಲ್ಲಿ ತಂಡದ ಆಟಗಾರ ಅಜಿಂಕ್ಯಾ ರಹಾನೆ, ಕೆಕೆಆರ್ನ ಲೂಕ್ ಫರ್ಗ್ಯೂಸನ್, ಸಿಎಸ್ಕೆಯ ಜೋಶ್ ಹಜಲ್ವುಡ್ ಸೇರಿದಂತೆ ಪ್ರಮುಖ ಆಟಗಾರರದ್ದು ಇದೇ ಸ್ಥಿತಿ.
ಹೀಗಾಗಿ ಅಂತಹವರಿಗೊಂದು ಅವಕಾಶ ಕಲ್ಪಿಸುವ ಸಲುವಾಗಿ ಐಪಿಎಲ್ನಲ್ಲಿ ಹೊಸ ನಿಯಮವೊಂದು ಜಾರಿಗೆ ಬಂದಿದೆ. ಮಧ್ಯ ಆವೃತ್ತಿ ಮುಗಿದ ನಂತರ ಒಂದು ತಂಡದಲ್ಲಿರುವ ಆಟಗಾರರನ್ನು ಬೇರೆ ಫ್ರಾಂಚೈಸಿ ಬಯಸಿದರೆ ವರ್ಗಾವಣೆ ಮಾಡುವುದೇ ಆ ನಿಯಮದ ಉದ್ದೇಶ. ಆದರೆ, ಇದು ಬಿಸಿಸಿಐಯ ನಿಯಮದಡಿಗೆ ಬರಲಿದೆ. ಈ ನಿಯಮದ ಪ್ರಕಾರ ಒಂದು ತಂಡದಲ್ಲಿರುವ ಆಟಗಾರರು ಮತ್ತೊಂದು ತಂಡಕ್ಕೆ ವರ್ಗಾವಣೆ ಮಾಡಬಹುದು. ಹೀಗಾಗಿ, ಕೆಲ ತಂಡಗಳಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗದಲ್ಲಿ ಅನುಭವಿಗಳ ಕೊರತೆ ಎದ್ದು ಕಾಣುತ್ತಿದ್ದು, ಅವರ ಸ್ಥಾನಗಳ ಬದಲಿಗೆ ಇತರ ತಂಡಗಳಲ್ಲಿ ಬೆಂಚ್ ಕಾದಿರುವ ಆಟಗಾರರನ್ನು ವರ್ಗಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ.
ನಿಯಮದ ವಿವರ: ನಮ್ಮ ತಂಡದ ಈ ಆಟಗಾರ ಬೇಡ, ಬೇರೆ ತಂಡದಲ್ಲಿ ಆಡಲು ನಮಗೆ ಯಾವುದೇ ಅಭ್ಯಂತರ ಇಲ್ಲ ಎಂದು ಫ್ರಾಂಚೈಸಿ ಬಯಸಿದರೆ ಮತ್ತೊಂದು ತಂಡದಲ್ಲಿ ಆಡಬಹುದು. ಆದರೆ, ಆ ಆಟಗಾರ ಈ ಬಾರಿಯ ಐಪಿಎಲ್ನ ಮಧ್ಯಾವಧಿಯೊಳಗೆ ಎರಡು ಪಂದ್ಯಕ್ಕಿಂತ ಹೆಚ್ಚು ಆಡಿರಬಾರದು. ಎಲ್ಲ ತಂಡಗಳು 7 ಪಂದ್ಯಗಳನ್ನು ಆಡಿದ ನಂತರ ಮಧ್ಯಾವಧಿ ಎನ್ನಲಾಗುತ್ತದೆ.
ಈಗಾಗಲೇ ಎಲ್ಲ ತಂಡಗಳು ಏಳು ಪಂದ್ಯಗಳನ್ನು ಆಡಿವೆ. ಮೊದಲಾರ್ಧ ಆವೃತ್ತಿ ನಿನ್ನೆಗೆ (ಅಕ್ಟೋಬರ್ 13) ಮುಗಿದಿದ್ದು, ಎರಡನೇ ಋತುವು ಇಂದಿನಿಂದ ಪ್ರಾರಂಭಗೊಳ್ಳಲಿದೆ. ಗಾಯ ಮತ್ತು ಫಿಟ್ನೆಸ್ ಕೊರತೆಯಿಂದ ಪ್ರಮುಖ ಆಟಗಾರರನ್ನು ಕಣಕ್ಕಿಳಿಸದ ತಂಡಗಳು, ಎರಡನೇ ಆವೃತ್ತಿಯ ನಂತರವಾದರೂ ಮೈದಾನಕ್ಕಿಳಿಸುತ್ತವೆಯೇ ಎಂಬ ಪ್ರಶ್ನೆ ಎದ್ದಿದೆ.
ಲೆಗ್ ಸ್ಪಿನ್ನರ್ ತಾಹೀರ್ ಕಳೆದ ಆವೃತ್ತಿಯಲ್ಲಿ ಆಡಿದ 17 ಪಂದ್ಯಗಳಲ್ಲಿ 26 ವಿಕೆಟ್ಗಳನ್ನು ಪಡೆದಿದ್ದರು. ಆಲ್ರೌಂಡರ್ ಮಿಚೆಲ್ ಸ್ಯಾಂಟ್ನರ್ ಕೂಡ ಕಾಣಿಸಿಕೊಂಡಿಲ್ಲ. ಸಿಎಸ್‌ಕೆ ತಂಡದಲ್ಲಿ ಬೌಲರ್ಗಳು ಮೇಲುಗೈ ಸಾಧಿಸುತ್ತಿರುವ ಕಾರಣ, ಬೌಲಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅಜಿಂಕ್ಯ ರಹಾನೆ ಕೂಡ ಈ ಬಾರಿ ಕಣಕ್ಕಿಳಿದಿಲ್ಲ. ಕಳೆದ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಶತಕ ಸೇರಿದಂತೆ 32.75ರ ಸರಾಸರಿಲ್ಲಿ 14 ಪಂದ್ಯಗಳಲ್ಲಿ 393 ರನ್ ಗಳಿಸಿದ್ದರು.
ಎಷ್ಟೋ ಆಟಗಾರರು ಗಾಯಳುಗಳಾಗಿ ತಂಡದಿಂದ ಹೊರ ಬಿದ್ದಿದ್ದು, ಅವರ ಸ್ಥಾನಕ್ಕೆ ಈಗಲಾದರೂ ಕೆಲವರನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ. ಈ ಮೂಲಕ ಇಷ್ಟು ದಿನ ಬೆಂಚ್ ಕಾದಿದ್ದ ಆಟಗಾರರಿಗೆ ಮುಂದಾದರೂ ಅವಕಾಶ ಇದೆ. ಮೊನ್ನೆ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡದ ಸುನಿಲ್ ನರೇನ್ ಅವರು ಅಕ್ರಮ ಬೌಲಿಂಗ್ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ, ಅವರ ಬೌಲಿಂಗ್ ಅನ್ನು ಪರೀಕ್ಷೆಗೆ ಒಳಪಡಿಸಬೇಕಾದ ಕಾರಣ, ತಂಡದಿಂದ ಹೊರಗಿಡಲಾಗಿದೆ.
ಇತ್ತ ವೇಗಿ ಭವನೇಶ್ವರ್ ಕುಮಾರ್ ಕೂಡ ಗಾಯದಿಂದ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ಹೊರಗುಳಿದಿದ್ದಾರೆ. ರಾಜಸ್ಥಾನ್ ಪರ ಶ್ರೇಯಸ್ ಗೋಪಾಲ್ ಕೂಡ ಮಿಂಚುತ್ತಿಲ್ಲ. ಹಾಗೆಯೇ ಡೆಲ್ಲಿ ಕ್ಯಾಪಿಟಲ್ಸ್ಗೂ ಅಮಿತ್ ಮಿಶ್ರಾ ಅವರ ಬೌಲಿಂಗ್ ದಾಳಿ ಇಲ್ಲದಂತಾಗಿದೆ. ಹೀಗೆ ತಂಡಗಳಲ್ಲಿ ಅನುಭವಿ ಆಟಗಾರರ ಈ ಮೂಲಕ ತಂಡಗಳಿಗೆ ದೊಡ್ಡ ನಷ್ಟ ತಂದಿದೆ. ಹೀಗಾಗಿ, ಈ ತಂಡಗಳ ಪ್ರಾಂಚೈಸಿಗಳು ಅವರ ಸ್ಥಾನಗಳನ್ನು ತುಂಬಲು ಈವರೆಗೂ ಬೆಂಚ್ ಕಾದಿರುವ ಬೇರೆ ತಂಡದ ಆಟಗಾರರನ್ನು ವರ್ಗಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಭುವಿ ಅಲಭ್ಯತೆಯಿಂದ ಕಾಡುತ್ತಿರುವ ಎಸ್ಆರ್ಎಚ್ ತಂಡ, ಕೆಕೆಆರ್ನ ಲೂಕಿ ಫರ್ಗ್ಯೂಸನ್ ಅಥವಾ ಚನ್ನೈನ ಜೋಶ್ ಹಜಲ್ವುಡ್ ಅವರನ್ನು ತಂಡಕ್ಕೆ ಕರೆಸಿಕೊಳ್ಳುವ ಸಾಧ್ಯತೆ ಇದೆ. ಹಾಗೆಯೇ ಬ್ಯಾಟಿಂಗ್ ವಿಭಾಗದಲ್ಲಿ ಸ್ವಲ್ಪಮಟ್ಟಿಗೆ ಕಳಪೆ ಪ್ರದರ್ಶನ ತೋರುತ್ತಿರುವ ಸಿಎಸ್‌ಕೆ ಮತ್ತು ಕೆಕೆಆರ್ ತಂಡಗಳು ರಹಾನೆಯನ್ನು ಮೈದಾನಕ್ಕಿಳಿಸುವ ಚಿಂತನೆ ನಡೆಸಿವೆ. ಅದೇ ರೀತಿ ಮುಂಬೈ ಇಂಡಿಯನ್ಸ್ ಕೂಡ ಆಸಕ್ತಿ ತೋರುತ್ತಿದೆ.
ಹಿಂದಿನ ಸೀಸನ್ನಲ್ಲಿ ಕೋಲ್ಕತಾ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಕ್ರಿಸ್ ಲಿನ್ ಅವರು ಈ ಬಾರಿ ಮುಂಬೈ ಇಂಡಿಯನ್ಸ್ ಪರ ಇನ್ನೂ ಒಂದು ಆಟವನ್ನು ಆಡಲಿಲ್ಲ. ಬ್ಯಾಟಿಂಗ್‌ನಲ್ಲಿ ಹೆಣಗಾಡುತ್ತಿರುವ ಕೆಕೆಆರ್ ಅಥವಾ ಸಿಎಸ್‌ಕೆ ಕೂಡ ಅವರನ್ನು ಪರಿಗಣಿಸಬಹುದು. ಕಳೆದ ಋತುವಿನಲ್ಲಿ ಲಿನ್ 405 ರನ್ ಗಳಿಸಿದ್ದರು ಮತ್ತು ಕೆಕೆಆರ್ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ್ದವರು.
ವರ್ಗಾವಣೆಗೆ ಅರ್ಹರಾದವರು: ಮಿಚೆಲ್ ಸ್ಯಾಂಟ್ನರ್ ಮತ್ತು ಜೋಶ್ ಹಜಲ್ವುಡ್ (ಸಿಎಸ್‌ಕೆ), ವಿಜಯ್ ಶಂಕರ್, ಮೊಹಮ್ಮದ್ ನಬಿ ಮತ್ತು ವೃದ್ಧಿಮಾನ್ ಸಹಾ (ಎಸ್‌ಆರ್‌ಹೆಚ್), ಮುಜೀಬ್ ಉರ್ ರೆಹಮಾನ್, ಕ್ರಿಸ್ ಜೋರ್ಡಾನ್, ಕ್ರಿಸ್ ಗೇಲ್ (ಪಂಜಾಬ್), ಟಾಮ್ ಬಾಂಟನ್, ಲೂಕಿ ಫರ್ಗ್ಯೂಸನ್ (ಕೆಕೆಆರ್) ಮತ್ತು ಡೇವಿಡ್ ಮಿಲ್ಲರ್ (ಆರ್ಆರ್) ಅವರ ಹೆಸರುಗಳು ವರ್ಗಾವಣೆಗೆ ಹೆಚ್ಚಾಗಿ ಕೇಳಿ ಬರುತ್ತಿವೆ.