ಅಬುಧಾಬಿ: 2020ರ ಇಂಡಿಯನ್ ಪ್ರೀಮಿಯರ್ ಲೀಗ್, ಅಂತಿಮ ಹಂತ ತಲುಪಿದ್ದು, ಇಂದು ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಡಲಿವೆ.
ಸತತ 4 ಪಂದ್ಯ ಸೋತರೂ ರನ್ರೇಟ್ ಆಧಾರದ ಮೇಲೆ 3 ವರ್ಷಗಳ ಬಳಿಕ ಪ್ಲೇ - ಆಫ್ ತಲುಪಿರುವ ಆರ್ಸಿಬಿ ತಂಡಕ್ಕೆ ಹೈದರಾಬಾದ್ ನಿಜಕ್ಕೂ ಕಠಿಣ ಸವಾಲೊಡ್ಡಲಿದೆ. ಸೋತ ತಂಡ ಟೂರ್ನಿಯಿಂದ ಹೊರ ಬೀಳಲಿದ್ದು, ಉಭಯ ತಂಡಗಳ ನಡುವೆ ಹೈವೋಲ್ಟೇಜ್ ಕದನ ನಿರೀಕ್ಷಿಸಲಾಗಿದೆ.
ಆರ್ಸಿಬಿಗೆ ಸ್ಪೋಟಕ ಆರಂಭ ಒದಗಿಸಿಕೊಡುವಲ್ಲಿ ಓಪನರ್ಗಳು ವಿಫಲರಾಗುತ್ತಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಎಬಿ ಡಿವಿಲಿಯರ್ಸ್ ಕಳೆದ ಕೆಲ ಪಂದ್ಯಗಳಿಂದ ರನ್ಗಳಿಸಲು ಕೋಂಚ ಪರದಾಡುತ್ತಿದ್ದಾರೆ. ಜೋಶ್ ಫಿಲಿಪ್ಪೆ ಸ್ಫೋಟಕ ಆಟ ಆಡುತ್ತಿಲ್ಲ. ಕಳೆದ ಕೆಲ ಪಂದ್ಯಗಳನ್ನು ನೋಡಿದ್ರೆ ಆರ್ಸಿಬಿ ತಂಡ ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲವಾಗುತ್ತಿದೆ.
ಬೆಂಗಳೂರು ತಂಡ ಬೌಲರ್ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಚಹಾಲ್ ತಮ್ಮ ವಿಕೆಟ್ ಅಭಿಯಾನ ಮುಂದುವರೆಸಿದ್ರೆ, ವಾಷಿಂಗ್ಟನ್ ಸುಂದರ್ ರನ್ಗಳಿಕೆಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಮೊಹಮ್ಮದ್ ಸಿರಾಜ್ ಮತ್ತು ಕ್ರಿಸ್ ಮೋರಿಸ್ ಉತ್ತಮವಾಗಿ ಸ್ಪೆಲ್ ಮಾಡುತ್ತಿದ್ದಾರೆ. ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದ ಸೈನಿ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ಟೂರ್ನಿ ಆರಂಭದಲ್ಲಿ ಮಂಕಾಗಿದ್ದ ಹೈದರಾಬಾದ್ ತಂಡ ನಂತರ ಭರ್ಜರಿಯಾಗಿ ಕಂಬ್ಯಾಕ್ ಮಾಡಿದೆ. ರಾಜಸ್ಥಾನ್ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ಹಾಗೂ ಆರ್ಸಿಬಿ ತಂಡಗಳನ್ನು ಸೋಲಿಸಿ ಪ್ಲೇ-ಆಫ್ ಪ್ರವೇಶಿಸಿದೆ. ಸ್ವತಃ ನಾಯಕ ಡೇವಿಡ್ ವಾರ್ನರ್ ಭರ್ಜರಿ ಫಾರ್ಮ್ನಲ್ಲಿದ್ದಾರೆ. ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ.
ಬೌಲಿಂಗ್ನಲ್ಲೂ ಹೈದರಾಬಾದ್ ಬೌಲಿಂಗ್ ಶಕ್ತಿಯುತವಾಗಿದೆ. ಸಂದೀಪ್ ಶರ್ಮಾ, ನಟರಾಜನ್, ರಶೀದ್ ಖಾನ್ ಹಾಗೂ ಜೇಸನ್ ಹೋಲ್ಡರ್ ಅದ್ಭುತ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ದು, ಇಂದಿನ ಪಂದ್ಯದಲ್ಲೂ ಮಿಂಚುವ ವಿಶ್ವಾಸ ಹೊಂದಿದ್ದಾರೆ.