ಶಾರ್ಜಾ: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ಮುಂಬೈ ತಂಡ 10 ವಿಕೆಟ್‌ಗಳ ಸೋಲು ಕಂಡಿದ್ದು, ಬಹುಶಃ ಈ ಸೋಲು 2020ರ ಸೀಸನ್ನಲ್ಲೇ ನಮ್ಮ ಕೆಟ್ಟ ಪ್ರದರ್ಶನ ಎಂದು ನಾಯಕ ರೋಹಿತ್ ಶರ್ಮಾ ಬೇಸರ ಹೊರಹಾಕಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ ತಂಡ 149 ರನ್ ಗಳಿಸಿತು. ಭರ್ಜರಿ ಬ್ಯಾಟಿಂಗ್ ನಡೆಸಿದ ಹೈದರಾಬಾದ್ ತಂಡದ ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ವೃದ್ಧಿಮಾನ್ ಸಹಾ ಅಜೇಯ 85 ಮತ್ತು 58 ರನ್ ಗಳಿಸಿ 18 ನೇ ಓವರ್‌ನಲ್ಲಿ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದರು.
ಪಂದ್ಯ ಮುಗಿದ ಬಳಿಕ ಮಾತನಾಡಿದ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ, "ಈ ಪಂದ್ಯವನ್ನು ನಾವು ನೆನಪಿಟ್ಟುಕೊಳ್ಳಲು ಬಯಸುವ ದಿನವಲ್ಲ, ಬಹುಶಃ ಇದು ಈ ಸೀಸನ್ನ ಕೆಟ್ಟ ಪ್ರದರ್ಶನವಾಗಿದೆ. ನಾವು ಕೆಲ ಹೊಸ ಪ್ರಯತ್ನಕ್ಕೆ ಯತ್ನಿಸಿದ್ವಿ, ಅದ್ಯಾವುದೂ ಫಲ ನೀಡಲಿಲ್ಲ. ಟಾಸ್ ಪರಿಣಾಮ ಬೀರುತ್ತದೆ ಎಂದು ತಿಳಿದಿತ್ತು. ಆದರೆ ಅದನ್ನು ಪರಿಗಣನೆಗೆ ತೆಗೆದುಕೊಳ್ಳದಿರಲು ನಿರ್ಧರಿಸಿದ್ದೆವು. ಇಂದು ನಾವು ಉತ್ತಮ ಕ್ರಿಕೆಟ್ ಆಡಲಿಲ್ಲ "ಎಂದು ರೋಹಿತ್ ಹೇಳಿದ್ದಾರೆ.
"ಗಾಯದ ಸಮಸ್ಯೆಯಿಂದ ಕಳೆದ ಕೆಲ ಪಂದ್ಯಗಳಲ್ಲಿ ಕಣಕ್ಕಿಳಿಯದ ರೋಹಿತ್ ಶರ್ಮಾ ಹೈದರಾಬಾದ್ ವಿರುದ್ಧ ನಿನ್ನೆ ಮೈದಾನಕ್ಕಿಳಿದಿದ್ದರು. ಈ ಬಗ್ಗೆ ಮಾತನಾಡಿದ ರೋಹಿತ್, ಮೈದಾನಕ್ಕೆ ವಾಪಸ್ ಆಗಿದ್ದು ಸಂತೋಷ ತರಿಸಿದೆ. ಇನ್ನು ಕೆಲ ಪಂದ್ಯಗನ್ನು ಆಡಲು ಎದುರು ನೋಡುತ್ತಿದ್ದೇನೆ. ಏನಾಗುತ್ತೆ ನೋಡೋಣ ಸದ್ಯಕ್ಕೆ ಗಾಯದಿಂದ ಸಂಪೂರ್ಣ ಗುಣಮುಖನಾಗಿದ್ದೇನೆ" ಎಂದಿದ್ದಾರೆ.
ಗೆಲುವು ಅನಿವಾರ್ಯವಾಗಿದ್ದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಪ್ಲೇ ಆಫ್ ಪ್ರವೇಶಿಸಿದೆ.