ಅಬುದಾಭಿ: ಕಳೆದ ಪಂದ್ಯಗಳಲ್ಲಿ ಸೋಲು ಕಂಡಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಪ್ ತಂಡಗಳು ಇಂದು ಮುಖಾಮುಖಿಯಾಗುತ್ತಿವೆ.
ಉಭಯ ತಂಡಗಳು ಆಡಿದ 3 ಪಂದ್ಯಗಳಲ್ಲಿ ಒಂದನ್ನು ಗೆದ್ದು, ಎರಡರಲ್ಲಿ ಸೋತಿವೆ. ಎರಡೂ ತಂಡಗಳ ಒಂದು ಪಂದ್ಯ ಟೈ ಆಗಿದ್ದು, ಸೂಪರ್ ಓವರ್ನಲ್ಲಿ ಸೋಲು ಕಂಡಿವೆ. ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ನೇತೃತ್ವದ ತಂಡಗಳು ಬಲಿಷ್ಠ ಆಟಗಾರರನ್ನು ಹೊಂದಿದ್ದು, ಇಂದು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ದೊರೆಯುವ ಸಾಧ್ಯತೆ ಇದೆ.
ಇಲ್ಲಿಯವರೆಗೆ ಉಭಯ ತಂಡಗಳು 24 ಬಾರಿ ಮುಖಾಮುಖಿಯಾಗಿದ್ದು, ಪಂಜಾಬ್ 11ರಲ್ಲಿ ಗೆಲುವು ಸಾಧಿಸಿದ್ರೆ, ಮುಂಬೈ 13 ಪಂದ್ಯದಲ್ಲಿ ಜಯ ಗಳಿಸಿ ಮೇಲುಗೈ ಸಾಧಿಸಿದೆ.
ಮುಂಬೈ ಇಂಡಿಯನ್ಸ್ ತಂಡ ಬ್ಯಾಟಿಂಗ್ ವಿಭಾಗದಲ್ಲಿ ಬಲಾಡ್ಯ ಆಟಗಾರರನ್ನೇ ಹೊಂದಿದೆ. ರೋಹಿತ್ ಶರ್ಮಾ, ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಸೌರಬ್ ತಿವಾರಿ, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ ಮುಂಬೈನ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಮಿಚಿದ್ದ ಇಶಾನ್ ಕಿಶನ್ ತಂಡಕ್ಕೆ ಮತ್ತಷ್ಟು ಭರವಸೆ ನೀಡಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಯಾರ್ಕರ್ ಸ್ಪೆಷಲಿಸ್ಟ್ ಬುಮ್ರಾ, ಟ್ರೆಂಟ್ ಬೌಲ್ಟ್, ಜೇಮ್ಸ್ ಪ್ಯಾಟಿನ್ಸನ್, ರಾಹುಲ್ ಚಹರ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಕೆ.ಎಲ್.ರಾಹುಲ್ ನಾಯಕತ್ವದಲ್ಲಿ ಪಂಜಾಬ್ ಪರ ಕನ್ನಡಿಗರು ಸ್ಫೋಟಕ ಆಟವಾಡುತ್ತಿದ್ದಾರೆ. ರಾಹುಲ್, ಮಾಯಾಂಕ್ ಅಗರ್ವಾಲ್ ಇಬ್ಬರು ಈಗಾಗಲೇ ಟೂರ್ನಿಯಲ್ಲಿ ಶತಕ ಸಿಡಿಸಿದ್ದು ಭರ್ಜರಿ ಪಾರ್ಮ್ನಲ್ಲಿದ್ದಾರೆ. ಇತ್ತ ಮ್ಯಾಕ್ಸ್ ವೆಲ್, ಪೂರನ್, ಕರುಣ್ ನಾಯರ್, ನೀಶಮ್ ಕೂಡ ಸಂದರ್ಭಕ್ಕೆ ತಕ್ಕಂತೆ ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ. ಇತ್ತ ಕೆರಿಬಿಯನ್ ದೈತ್ಯ ಕ್ರಿಸ್ ಗೇಲ್ ಇಲ್ಲಿಯವರೆಗೆ ಮೈದಾನಕ್ಕೆ ಇಳಿದಿಲ್ಲ. ಪಂಜಾಬ್ ಬೌಲಿಂಗ್ ವಿಭಾಗದಲ್ಲಿ ಶೆಲ್ಡನ್ ಕಾಟ್ರೆಲ್, ಮೊಹಮ್ಮದ್ ಶಮಿ, ಸ್ಪಿನ್ನರ್‌ಗಳಾದ ರವಿ ಬಿಷ್ನೋಯಿ, ಮುರುಗನ್ ಅಶ್ವಿನ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಎರಡೂ ತಂಡಗಳಲ್ಲಿ ಹೊಡಿ ಬಡಿ ಆಟಗಾರರೇ ತುಂಬಿದ್ದು, ಇಂದಿನ ಪಂದ್ಯದಲ್ಲಿ ರನ್ ಹೊಳೆ ಹರಿಯುವ ನಿರೀಕ್ಷೆ ಇದೆ.