ಶಾರ್ಜಾ: ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಸಾಲು ಸಾಲು ಸೋಲನ್ನೇ ಕಾಣುತ್ತಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಈ ನಡುವೆ ತಂಡಕ್ಕೆ ಚೈತನ್ಯ ತುಂಬುವಂತಹ ಸುದ್ದಿ ಹೊರಬಿದ್ದಿದೆ. ಅನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಂಡೀಸ್ ಆಟಗಾರ ಕ್ರಿಸ್ ಗೇಲ್ ಚೇತರಿಸಿಕೊಂಡಿದ್ದು, ಅಭ್ಯಾಸಕ್ಕಾಗಿ ಮೈದಾನಕ್ಕಿಳಿದಿದ್ದಾರೆ.
ಅಷ್ಟೇ ಅಲ್ಲದೆ ಮುಂದಿನ 15ರಂದು ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯಕ್ಕೆ ಮರಳುವುದು ಬಹುತೇಕ ಖಚಿತವಾಗಿದೆ.
ಇನ್ನು ಫುಡ್ ಪಾಯ್ಸನ್ನಿಂದಾಗಿ ಆಸ್ಪತ್ರೆ ಸೇರಿದ್ದ ಕಿಂಗ್ಸ್ ಓಪನಿಂಗ್ ಬ್ಯಾಟ್ಸ್ಮನ್ ಗೇಲ್ ಆರ್ಸಿಬಿ ವಿರುದ್ಧ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಲಾಗಿದೆ. ಈಗಾಗಲೇ ಅನಾರೋಗ್ಯದಿಂದ ಸಂಪೂರ್ಣ ಗುಣಮುಖರಾಗಿದ್ದು, ಮುಂದಿನ ಪಂದ್ಯದಲ್ಲಿ ಕಾಣಿಸಿಕೊಳ್ಳುವ ಕುರಿತು ತಂಡದಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
ಈ ಕುರಿತು ಮಾತನಾಡಿರುವ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ವಾಸಿಮ್ ಜಾಫರ್, ಗೇಲ್ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಅಲ್ಲದೆ ಮೈದಾನಕ್ಕಿಳಿಯಲು ಉತ್ಸುಕರಾಗಿದ್ದಾರೆ. ಜೊತೆಗೆ ನೆಟ್ನಲ್ಲಿಯೂ ಉತ್ತಮವಾಗಿ ಅಭ್ಯಾಸ ಮಾಡುತ್ತಿದ್ದಾರೆ ಎಂದಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಪದಾರ್ಪಣೆಗಾಗಿ ಕಾದಿದ್ದ ಗೇಲ್ಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಆದರೆ ಇದೀಗ ಚೇತರಿಸಿಕೊಂಡಿದ್ದು ಅಭ್ಯಾಸದಲ್ಲಿ ಭಾಗಿಯಾಗಿದ್ದಾರೆ. ಸತತ ಸೋಲಿನಿಂದ ಕಂಗೆಟ್ಟ ಕಿಂಗ್ಸ್ ಇಲೆವೆನ್ ತಂಡಕ್ಕೆ ಗೇಲ್ ಚೇತರಿಸಿಕೊಂಡಿರುವುದು ಹೊಸ ಚೈತನ್ಯ ತಂದಿದೆ.